ಹೊಯ್ಸಳ ವಂಶ - 
	11ನೆಯ ಶತಮಾನದ ಆದಿಭಾಗದಿಂದ 14ನೆಯ ಶತಮಾನದ ಮಧ್ಯಭಾಗದ ವರೆಗೆ, ವಿಶೇಷವಾಗಿ ದಕ್ಷಿಣ ಕರ್ನಾಟಕ ಮತ್ತು ಸುತ್ತಲಿನ ಭಾಗಗಳನ್ನು ಆಳಿದ ರಾಜಮನೆತನ. ಈ ವಂಶದ ಅರಸರ ರಾಜಧಾನಿ ಮೊದಲು ಶಶಕಪುರ ಅಥವಾ ಸೊಸೆವೂರು (ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಅಂಗಡಿ), ಅನಂತರ ಬೇಲೂರು ಮತ್ತು ದೋರಸಮುದ್ರ (ಹಾಸನ ಜಿಲ್ಲೆ). ಮಲೆನಾಡಿನ ಒಂದು ಚಿಕ್ಕ ಪಾಳೆಯಪಟ್ಟಾಗಿ ಆರಂಭವಾಗಿ, ತತ್ಕಾಲೀನ ಅಸ್ತವ್ಯಸ್ತ ರಾಜಕೀಯ ಪರಿಸ್ಥಿತಿಯ ಲಾಭಪಡೆದು, ಮೊದಲು ಕಲ್ಯಾಣ ಚಾಳುಕ್ಯರ ಸಾಮಂತರಾಗಿ ನೆಲೆಗೊಂಡು, ಮುಂದೆ ಶೌರ್ಯ ಹಾಗೂ ಸ್ವಸಾಮಥ್ರ್ಯದಿಂದ ರಾಜ್ಯವಿಸ್ತಾರಮಾಡಿ, ಸ್ವತಂತ್ರರಾಗಿ, ಸುಸಂದರ್ಭದಲ್ಲಿ ತಮ್ಮ ಪ್ರಭಾವವನ್ನು ತಮಿಳುನಾಡಿಗೂ ವಿಸ್ತರಿಸಿ, ನಾಡಿನ ಆರ್ಥಿಕ ಸಾಂಸ್ಕøತಿಕ ರಂಗಗಳಲ್ಲಿ ಉನ್ನತ ಸಾಧನೆಗಳಿಗೆ ಪ್ರೋತ್ಸಾಹ ನೀಡಿ, ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲ ವೈಭವೋಪೇತವಾಗಿ ಮೆರೆದ ಈ ರಾಜವಂಶದ ಇತಿಹಾಸ ಕರ್ನಾಟಕ ಇತಿಹಾಸದ ಒಂದು ಮುಖ್ಯ ಅಧ್ಯಾಯ.

	ರಾಜಕೀಯ ಇತಿಹಾಸ : ಹೊಯ್ಸಳರು ಯಾದವ ವಂಶದವರೆಂದೂ ಇವರ ಆದ್ಯನಾದ ಸಳ ಎಂಬವನು ತನ್ನ ಗುರುವಾದ ಜೈನಯತಿ ಸುದತ್ತಾಚಾರ್ಯನೊಡನೆ ಶಶಕಪುರದ ಬಳಿಯ ವಾಸಂತಿಕಾ ದೇವಾಲಯದಲ್ಲಿ ದೇವತೆಯ ಅರ್ಚನೆಯಲ್ಲಿ ತೊಡಗಿದ್ದಾಗ ಒಂದು ದಿನ ಹುಲಿಯೊಂದು ಅವರತ್ತ ಜಿಗಿದು ಬಂದಿತೆಂದೂ ಜೈನಮುನಿ ತನ್ನ ಕೈಯಲ್ಲಿದ್ದ ಕೋಲನ್ನು ಸಳನ ಕೈಗಿತ್ತು ಪೊಯ್ ಸಳ ಎಂದು ಅಪ್ಪಣೆ ಮಾಡಿದನೆಂದೂ ಸಳ ಧೈರ್ಯದಿಂದ ಹುಲಿಯನ್ನು ಕೊಂದನೆಂದೂ ಇದರಿಂದ ಸುಪ್ರೀತನಾದ ಮುನಿ ತನ್ನ ಶಿಷ್ಯ ರಾಜನಾಗುವಂತೆ ಸಳನನ್ನು ಹರಸಿದನೆಂದೂ ಆದ್ದರಿಂದಲೇ ಅವನ ವಂಶಕ್ಕೆ ಪೊಯ್ಸಳ ಎಂದು ಹೆಸರಾಯಿತೆಂದೂ ಹೊಯ್ಸಳರ ಶಾಸನಗಳು ತಿಳಿಸುತ್ತವೆ. ಆದರೆ ಈ ಕಥೆಗಳೆಲ್ಲ ಅನೇಕ ಮೂಲ ವ್ಯತ್ಯಾಸಗಳೊಡನೆ ಕೇವಲ 12 ಮತ್ತು ಅನಂತರದ ಶತಮಾನಗಳಲ್ಲಷ್ಟೇ ಕಂಡುಬರುವುದ ರಿಂದ ಇವೆಲ್ಲ ಹೊಯ್ಸಳರು ರಾಜ್ಯ ಸಾಧಿಸಿದ ಮೇಲೆ ಆ ವಂಶದ ಹೆಸರನ್ನು ವಿವರಿಸಲು ಹುಟ್ಟಿಕೊಂಡ ಕಟ್ಟುಕಥೆಗಳೆಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದ್ಯನೆಂದು ಹೇಳುವ ಸಳ ಐತಿಹಾಸಿಕ ವ್ಯಕ್ತಿ ಎಂಬುದು ಸಹ ಅನುಮಾನಾಸ್ಪದ.	 (ನೋಡಿ- ಸಳ)

	ಕರ್ನಾಟಕದಲ್ಲಿ ಚೋಳ ಪ್ರತಿನಿಧಿಯಾಗಿದ್ದ ಅಪ್ರಮೇಯ 1006ರಲ್ಲಿ ಹಾಕಿಸಿದ ಕಲಿಯೂರಿನ (ಮೈಸೂರು ಜಿಲ್ಲೆ, ತಿರುಮಕೂಡಲು ನರಸೀಪುರ ತಾಲ್ಲೂಕು) ಜಯಸ್ತಂಭ ಶಾಸನದಲ್ಲಿ ಹೊಯ್ಸಳ ಎಂಬ ಪದ ಮೊದಲಿಗೆ ದೊರಕುತ್ತದೆ. 1004ರ ಸುಮಾರಿನಲ್ಲಿ ಹಲವು ಶತಮಾನಗಳಿಂದ ದಕ್ಷಿಣ ಕರ್ನಾಟಕದ ಪ್ರಭುತ್ವವನ್ನು ಹೊಂದಿದ್ದ ಗಂಗವಂಶ ಚೋಳರಿಂದ ಮೂಲೋತ್ಪಾಟನವಾಯಿತು. ಅದರ ಜೊತೆಗೆ ಚೋಳರು ಹೊಸ ರಾಜನೀತಿಯನ್ನು ಅನುಸರಿಸಿ ತಾವು ಗೆದ್ದ ಪ್ರದೇಶಗಳನ್ನು ಪುನರ್ವಿಂಗಡಿಸಿ ತಮಿಳು ಹೆಸರುಗಳನ್ನಿಟ್ಟು, ಅಲ್ಲಿಗೆ ಚೋಳನಾಡಿನ ವ್ಯಕ್ತಿಗಳನ್ನೇ ಅಧಿಕಾರಕ್ಕೆ ನೇಮಿಸಿದ್ದರಿಂದ ಹಲವು ನಾಡುಗಳಲ್ಲಿ ಕಾಲಾಂತರದಿಂದ ವಂಶಪಾರಂಪರ್ಯವಾಗಿ ಅಧಿಕಾರ ದಲ್ಲಿದ್ದ ಸ್ಥಳೀಯ ಚಿಕ್ಕಪುಟ್ಟ ಗಂಗಾಶ್ರಿತರೆಲ್ಲ ಮೂಲೆಗುಂಪಾದರು. ಅತ್ತ ಕರ್ನಾಟಕದ ಒಂದು ಮುಖ್ಯ ಶಕ್ತಿಯಾಗಿದ್ದ ರಾಷ್ಟ್ರಕೂಟ ವಂಶವೂ ಕೊನೆಗೊಂಡು, ಅನಂತರ ಬಂದ ಚಾಳುಕ್ಯರಾದರೊ ಆಗತಾನೇ ಅಧಿಕಾರಸ್ಥರಾಗಿದ್ದುದರಿಂದ ಶೂರ ಚೋಳ ದೊರೆಗಳಾದ ರಾಜರಾಜ ಮತ್ತು ರಾಜೇಂದ್ರರ ಮುನ್ನಡೆಯನ್ನು ತಡೆಯುವ ಶಕ್ತಿಯನ್ನು ಇನ್ನೂ ಸಾಧಿಸಿರಲಿಲ್ಲ. ಇಂತಹ ವಿಷಮಸ್ಥಿತಿಯಲ್ಲಿ ಖತಿಗೊಂಡ ಕರ್ನಾಟಕದ ಚಿಕ್ಕಪುಟ್ಟ ವಂಶೀಯರೆಲ್ಲ ಒಂದುಗೂಡಿ ಚೋಳರನ್ನು ಎದುರಿಸುವ ಸನ್ನಾಹ ನಡೆಸಿದರು. ಇಂಥ ಒಂದು ಪ್ರಯತ್ನದ ಉಲ್ಲೇಖ ಕಲಿಯೂರು ಶಾಸನದಲ್ಲಿ ದೊರಕುತ್ತದೆ. ಹೊಯ್ಸಳವಂಶೀಯನೊಬ್ಬ ಈ ಸಂದರ್ಭದಲ್ಲಿ ನೇತೃತ್ವವನ್ನು ವಹಿಸಿ, ಚೋಳರನ್ನು ಸೋಲಿಸುವುದರಲ್ಲಿ ಅಸಫಲನಾದರೂ ಅವರ ರಾಜ್ಯ ವಿಸ್ತರಣೆಯನ್ನು ತಡೆಗಟ್ಟಿರಬೇಕೆಂದು ತೋರುತ್ತದೆ.

	ಹೊಯ್ಸಳರ ಶಾಸನಗಳಲ್ಲಿ ಆದ್ಯ ಸಳನಿಗೂ ಅಂಗಡಿಯ ವಾಸಂತಿಕಾದೇವಿಗೂ ಸಂಬಂಧವನ್ನು ಹೇಳಿರುವುದರಿಂದ ಮತ್ತು ಅತಿ ಪ್ರಾಚೀನ ಶಾಸನಗಳೆಲ್ಲ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ದೊರೆಯುವುದರಿಂದ ಇವರು ಮೂಲತಃ ಮಲೆನಾಡಿನವರು ಎಂದು ಸುಲಭವಾಗಿ ಊಹಿಸಬಹುದು. ಮೊದಮೊದಲು ಅಲ್ಲಿದ್ದ ಇತರ ತುಂಡು ರಾಜರ ಮೇಲೆ ವಿಜಯ ಗಳಿಸಿ ಇವರು ಪ್ರಸಿದ್ಧಿಗೆ ಬಂದಿರ ಬೇಕೆಂದು ಮಲೆವರ ಮಾರಿ, ಮಲೆಪರೊಳ್ ಗಂಡ ಮುಂತಾದ ಇವರ ಬಿರುದುಗಳು ತೋರಿಸುತ್ತವೆ.

	ನೃಪಕಾಮ (ಸು. 1000-45) ನಿಸ್ಸಂದೇಹವಾಗಿ ತಿಳಿದಿರುವ ಹೊಯ್ಸಳವಂಶದ ಮೊದಲ ದೊರೆ. ಇವನಿಗೆ ರಾಚಮಲ್ಲ ಪೆರ್ಮಾನಡಿ, ರಕ್ಕಸಗಂಗ ಎಂಬ ಹೆಸರುಗಳೂ ಇದ್ದುದರಿಂದ ಈತ ತಲಕಾಡಿನ ಗಂಗವಂಶದೊಡನೆ ಸಂಬಂಧವನ್ನು ಹೊಂದಿರಬೇಕೆಂದು ತೋರುತ್ತದೆ. ಹಾಸನ ಜಿಲ್ಲೆ ಮತ್ತು ಸುತ್ತಲ ಪ್ರದೇಶಗಳು ಮಾತ್ರ ಇವನ ಆಳಿಕೆಗೆ ಒಳಪಟ್ಟಿರಬೇಕೆಂದು ಇವನ ಶಾಸನಗಳ ಸೀಮಿತ ವ್ಯಾಪ್ತಿಯಿಂದ ತಿಳಿಯಬಹುದು. ತನ್ನ ಕಾಲದಲ್ಲಿ ಚೋಳಾಶ್ರಿತರಾದ ಕೊಂಗಾಳ್ವರನ್ನು ಎದುರಿಸಿದ್ದಲ್ಲದೆ(1022, 1026) ಯಾವುದೋ ಸಂದರ್ಭದಲ್ಲಿ ಬನವಾಸಿಯ ಮೇಲೆ ನಡೆದ(1027) ದಾಳಿಯನ್ನು ಎದುರಿಸಲು ಅಲ್ಲಿಯ ಅರಸರಿಗೆ ಸಹಾಯ ಮಾಡಿದ. ಅಂದರೆ ಈ ಕಾಲದಲ್ಲಿ ಹೊಯ್ಸಳರ ಪ್ರಭಾವ ಏರುಗತಿಯಲ್ಲಿದ್ದಿತೆಂದು ಊಹಿಸಲು ಅವಕಾಶವಿದೆ.

	ಮುಂದಿನ ದೊರೆ ವಿನಯಾದಿತ್ಯನಿಗೂ(ಸು.1045-98) ನೃಪಕಾಮ ನಿಗೂ ಸಂಬಂಧವೇನೆಂದು ಸ್ಪಷ್ಟವಾಗಿಲ್ಲ. ಆದರೆ ಅನಂತರದ ಕೆಲವು ಶಾಸನಗಳ ಆಧಾರದಿಂದ ಇವರು ತಂದೆ-ಮಕ್ಕಳಿರಬೇಕೆಂದು ಊಹಿಸುವ ಸಾಧ್ಯತೆ ಇದೆ. ಹೊಯ್ಸಳ ಶಾಸನಗಳಲ್ಲಿ ಹೆಚ್ಚಿನವು ಸಳನಾದ ಅನಂತರ ವಿನಯಾದಿತ್ಯನನ್ನೇ ವಂಶಾದ್ಯನಾಗಿ ವಿವರಿಸುತ್ತವೆಯಾದ್ದರಿಂದ ಪ್ರಾಯಃ ಇವನ ಕಾಲದಲ್ಲಿ ಹೊಯ್ಸಳ ರಾಜ್ಯ, ನೃಪಕಾಮನ ಪಾಳೆಯಗಾರಿಕೆ ಸ್ಥಿತಿಯನ್ನು ಮೀರಿ, ಮೊದಲಿಗೆ ಸ್ಪಷ್ಟ ರಾಜಕೀಯ ಘಟಕವಾಗಿ ರೂಪುಗೊಂಡಿರಬೇಕು. ವಿನಯಾದಿತ್ಯನ ಆಳಿಕೆ ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನೂ ಮೀರಿ ಸುತ್ತಣ ತುಮಕೂರು ಮತ್ತು ಮೈಸೂರು ಜಿಲ್ಲೆಗಳ ಭಾಗಗಳಿಗೂ ಹಬ್ಬಿದ್ದಿತು. ಒಂದು ಶಾಸನದ ಪ್ರಕಾರ ವಿನಯಾದಿತ್ಯನ ಕಾಲದಲ್ಲಿ ಹೊಯ್ಸಳ ರಾಜ್ಯಕ್ಕೆ ಕೊಂಕಣ, ಆಳ್ವಖೇಡ, ವೈನಾಡು ಮತ್ತು ತಲಕಾಡು ಗಡಿಪ್ರದೇಶಗಳಾಗಿದ್ದುವು. ಆಗಿನ ದಕ್ಷಿಣ ಭಾರತದ ಪ್ರಭಾವೀ ರಾಜಕೀಯ ಶಕ್ತಿಗಳಾಗಿದ್ದ ಚಾಳುಕ್ಯ ಮತ್ತು ಚೋಳ ರಾಜ್ಯಗಳ ನಡುವೆ ಇವನು ಆಳಬೇಕಾಗಿದ್ದರಿಂದ ಈತ ತನ್ನ ನಡೆಯಲ್ಲಿ ಬಹಳ ಜಾಗರೂಕತೆಯನ್ನು ವಹಿಸಬೇಕಾಗಿತ್ತು. ಹಳೆಯ ಗಂಗವಾಡಿಯ ಭಾಗಗಳನ್ನು ಇವನು ಆಳುತ್ತಿದ್ದುದರಿಂದ ಸ್ಥಳೀಯರೊಡನೆ ಇವನ ಸಂಬಂಧ ನಿಕಟವಾಗಿದ್ದು ಚೋಳರೊಡನೆ ಸ್ನೇಹ ಬೆಳೆಸುವ ಸಾಧ್ಯತೆಯೇ ಇರಲಿಲ್ಲವಾಗಿ, ತನ್ನ ಅಧಿಕಾರ ಭದ್ರತೆಗಾಗಿ ಚಾಳುಕ್ಯರೊಡನೆ ರಕ್ತಸಂಬಂಧ ಮತ್ತು ರಾಜಕೀಯ ಬಾಂಧವ್ಯವನ್ನು ಬೆಳೆಸಿ, ಹೊಯ್ಸಳರ ಮೂಲೋದ್ದೇಶವಾದ ಚೋಳೋತ್ಪಾಟನೆಗಾಗಿ ಶಕ್ತಿ ಸಂಚಯ ಮಾಡಿಕೊಳ್ಳಲಾರಂಭಿಸಿದ. ಉದ್ದಿಶ್ಯ ಸ್ಪಷ್ಟವಾಗಿದ್ದರೂ ಇನ್ನೂ ತಾನಿದ್ದ ಅಬಲ ಸ್ಥಿತಿಯಲ್ಲಿ ಚೋಳರ ಮೇಲೆ ಬೀಳುವುದು ಅಪಾಯಕರವೆಂದು ವಿನಯಾದಿತ್ಯ ಅರಿತಿರಬೇಕು. ಇವನ ಅರ್ಧ ಶತಮಾನಕ್ಕೆ ಹೆಚ್ಚಿನ ಆಳಿಕೆಯಲ್ಲಿಯೂ ಅವರೊಡನೆ ನೇರವಾಗಿ ಸೆಣಸಿಲ್ಲದಿರುವುದಕ್ಕೆ ಇದೇ ಕಾರಣ. ಆದರೆ ಚಾಳುಕ್ಯ 2ನೆಯ ಸೋಮೇಶ್ವರ ಮತ್ತು 6ನೆಯ ವಿಕ್ರಮಾದಿತ್ಯರೊಡನೆ ಉತ್ತಮ ಬಾಂಧವ್ಯವನ್ನು ಸಾಧಿಸಿಕೊಂಡು ತನ್ನ ಮಗ ಎರೆಯಂಗನನ್ನೂ ಮೊಮ್ಮಕ್ಕಳಾದ ಒಂದನೆಯ ಬಲ್ಲಾಳ, ವಿಷ್ಣುವರ್ಧನರನ್ನೂ ಚಾಳುಕ್ಯರ ದಂಡಯಾತ್ರೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಮೇಲ್ಮಟ್ಟದ ರಾಜಕೀಯ ಮತ್ತು ಯುದ್ಧತಂತ್ರಗಳಲ್ಲಿ ಅವರನ್ನು ನಿಷ್ಣಾತರಾಗುವಂತೆ ಮಾಡಿದ್ದಲ್ಲದೆ ಚಾಳುಕ್ಯರ ಬೆಂಬಲವನ್ನೂ ಗಳಿಸಿಕೊಂಡ. ಈ ರಾಜಕೀಯ ಮುತ್ಸದ್ದಿತನ ಮುಂದೆ ಹಲವೇ ವರ್ಷಗಳಲ್ಲಿ ಫಲ ನೀಡಿತು. ಚೋಳರ ಉಚ್ಚಾಟನೆ, ಹೊಯ್ಸಳರ ಬೃಹತ್ ಸಾಮ್ರಾಜ್ಯ ಸ್ಥಾಪನೆ ನೆರವೇರಿತು. ವಿನಯಾದಿತ್ಯನ ಅನಂತರ ಪಟ್ಟಕ್ಕೆ ಬಂದ ಅವನ ಮಗ ಎರೆಯಂಗನ ಆಳಿಕೆಯ ಕಾಲ (ಸು. 1098-1100) ಗಮನಾರ್ಹವಾದುದೇನಲ್ಲ. ಈ ಕಾಲಕ್ಕಾಗಲೇ ಇವನ ಮಕ್ಕಳಾದ ಒಂದನೆಯ ಬಲ್ಲಾಳ, ವಿಷ್ಣುವರ್ಧನರು ರಾಜಕೀಯ ಕ್ಷೇತ್ರದಲ್ಲಿ ಸಮರ್ಥರಾಗಿದ್ದರು.

	ಒಂದನೆಯ ಬಲ್ಲಾಳನ (ಸು. 1100-08) ಕಾಲದಲ್ಲಿ ಹೊಯ್ಸಳ ಇತಿಹಾಸದಲ್ಲಿ ಒಂದು ಮುಖ್ಯ ತಿರುವು ಕಂಡುಬರುತ್ತದೆ. ಈ ಹಿಂದಿನ ದೊರೆಗಳಂತೆ ಈತನೂ ತ್ರಿಭುವನಮಲ್ಲ ಎಂಬ ಬಿರುದನ್ನು ಧರಿಸಿ ಚಾಳುಕ್ಯ ಸಾಮಂತತ್ವವನ್ನು ಒಪ್ಪಿಕೊಂಡಿದ್ದರೂ ಪ್ರಾಯಃ ಚಾಳುಕ್ಯ ವಿಕ್ರಮಾದಿತ್ಯನ ತಪ್ಪುನಡೆಯಿಂದಾಗಿ ಅವನ ಮಿತ್ರ ಸಾಮಂತ ಹೊಯ್ಸಳರ ಮೇಲೆರಗಿ ಬಂದು ಚಾಳುಕ್ಯ-ಹೊಯ್ಸಳ ಸಂಬಂಧವನ್ನು ಕಲಕಿದ. ಈ ಸಂದರ್ಭದಲ್ಲಿ ಶೌರ್ಯದಿಂದ ಹೋರಾಡಿ ವಿಜಯಿಗಳಾದ ಬಲ್ಲಾಳ-ವಿಷ್ಣುವರ್ಧನರಲ್ಲಿ ಹೊಸ ಧೈರ್ಯ, ಹುಮ್ಮಸ್ಸು ಬೆಳೆದುಬಂದು ಸುತ್ತಣ ಚೆಂಗಾಳ್ವ, ಆಳುಪ ರಾಜ್ಯಗಳನ್ನೇ ಅಲ್ಲದೆ ಚಾಳುಕ್ಯರ ಸಾಮಂತರಾದ ಉಚ್ಚಂಗಿ ಪಾಂಡ್ಯರ ಮೇಲೂ ಜಯಗಳಿಸಿದರು. ಇದು ಮಂಡಲೇಶ್ವರರಾಗಿದ್ದ ಹೊಯ್ಸಳರು ಸ್ವತಂತ್ರ ರಾಜ್ಯವನ್ನು ಸಾಧಿಸುವತ್ತ ಇಟ್ಟ ಮೊದಲ ಹೆಜ್ಜೆ ಎಂದು ಗುರುತಿಸಬಹುದು.

	ವಿಷ್ಣುವರ್ಧನನ 34 ವರ್ಷಗಳ ಆಳಿಕೆ (ಸು. 1108-42) ಹೊಯ್ಸಳ ಇತಿಹಾಸದಲ್ಲಿ ಮಹತ್ತ್ವಪೂರ್ಣವಾದುದು. ಚಿಕ್ಕ ನಾಡಾಗಿದ್ದ ಹೊಯ್ಸಳ ರಾಜ್ಯ ಸಾಮ್ರಾಜ್ಯ ಪದವನ್ನು ರೂಢಿಸಿಕೊಂಡಿದ್ದು ಈ ಕಾಲದಲ್ಲಿ. ವಿಷ್ಣುವರ್ಧನ ತಾನು ಪಟ್ಟವೇರುವ ಮೊದಲೇ ತಂದೆ ಎರೆಯಂಗ ಮತ್ತು ಅಣ್ಣ ಬಲ್ಲಾಳರ ಕಾಲದಲ್ಲಿ ಯುದ್ಧ ಮತ್ತು ರಾಜ್ಯಾಡಳಿತದಲ್ಲಿ ಭಾಗಿಯಾಗಿದ್ದು ಅಪಾರ ಅನುಭವವನ್ನು ಸಾಧಿಸಿದ್ದ. ಇದರ ಪೂರ್ಣ ಉಪಯೋಗವನ್ನು ಪಡೆದುಕೊಂಡು, ಆ ಪ್ರದೇಶದ ಶೂರಯೋಧರನ್ನು ಕಲೆಹಾಕಿ, ಗಂಗವಾಡಿಯನ್ನು ಪರಕೀಯರ ಆಳಿಕೆಯಿಂದ ಮುಕ್ತಗೊಳಿಸಿ, ಹೊಯ್ಸಳ ರಾಜ್ಯವನ್ನು ಚಾಳುಕ್ಯಾಧೀನತ್ವದಿಂದ ಪಾರುಮಾಡುವ ಎರಡು ಗುರಿಗಳನ್ನಿಟ್ಟುಕೊಂಡು ಕಾರ್ಯಾರಂಭ ಮಾಡಿದ. ಚೋಳರೂ ಚಾಳುಕ್ಯರೂ ಪ್ರಬಲ ಸಾಮ್ರಾಟರಾದ್ದರಿಂದ ಅವರನ್ನು ಮೊದಲು ಎದುರಿಸುವುದು ಆತ್ಮಘಾತಕವಾದೀತೆಂದು ಭಾವಿಸಿ, ತನ್ನ ರಾಜ್ಯಾಡಳಿತದ ಆರಂಭದಲ್ಲಿ ಮೊದಲಿಗೆ ರಾಜ್ಯದ ಸುತ್ತಲಿದ್ದ ಚಿಕ್ಕಪುಟ್ಟ ತುಂಡರಸರನ್ನು ಮೆಟ್ಟಿ ತನ್ನ ಸೈನ್ಯಬಲ ಹಾಗೂ ಕೋಶವನ್ನು ವೃದ್ಧಿಸಿಕೊಂಡ. ಈ ಕಾರ್ಯಾಚರಣೆಯಲ್ಲಿ ಚೆಂಗಾಳ್ವರೂ, ಕೊಂಗಾಳ್ವರೂ ಆಳುಪರೂ ಪ್ರಾಯಶಃ ಉಚ್ಚಂಗಿಯ ಪಾಂಡ್ಯರೂ ಪೆಟ್ಟು ತಿಂದರು. ಇವರುಗಳ ಮೇಲೆ ಗಳಿಸಿದ ಜಯ ವಿಷ್ಣುವರ್ಧನನಿಗೆ ಹೆಚ್ಚು ಕೆಚ್ಚನ್ನು ಒದಗಿಸಿತು. ಕುಲೋತ್ತುಂಗ ಚೋಳ ವೆಂಗಿಯ ರಾಜಕೀಯದಲ್ಲಿ ಮಗ್ನನಾಗಿದ್ದ ಸುಸಂದರ್ಭವನ್ನು ಉಪಯೋಗಿಸಿಕೊಂಡು ತಲಕಾಡಿನ ಮೇಲೆ ದಾಳಿ ಮಾಡಿ (1116) ಅಲ್ಲಿದ್ದ ಆದಿಯಮನೆಂಬ ಚೋಳಪ್ರತಿನಿಧಿಯನ್ನೂ ಇನ್ನಿತರ ಚೋಳಾಧಿಕಾರಿಗಳನ್ನೂ ಓಡಿಸಿ ತಲಕಾಡನ್ನು ವಶಪಡಿಸಿ ಕೊಂಡದ್ದೇ ಅಲ್ಲದೆ, ಅದೇ ಭರದಲ್ಲಿ ಅವರುಗಳನ್ನು ಅಟ್ಟಿಸಿಕೊಂಡು ಘಟ್ಟದ ಮೇಲೆ ಈಗಿನ ಕೋಲಾರ, ಬೆಂಗಳೂರು ಜಿಲ್ಲೆಯ ಪ್ರದೇಶಗಳೂ ಘಟ್ಟದ ಕೆಳಗಿನ ಕೊಯಮತ್ತೂರು, ಸೇಲಂ, ಧರ್ಮಪುರಿ, ಉತ್ತರ ಆರ್ಕಾಟು ಜಿಲ್ಲೆಗಳ ಭಾಗಗಳ ಮೇಲೂ ದಾಳಿಮಾಡಿ, ಪ್ರಾಯಶಃ ಕಾಂಚೀಪುರದವರೆಗೂ ಮುನ್ನಡೆದ. ಇದೇ ಹುರುಪಿನಲ್ಲೇ ಉಚ್ಚಂಗಿ ಪಾಂಡ್ಯರನ್ನೂ ಸೋಲಿಸಿದ. ಒಂದು ಚಿಕ್ಕ ಅಧೀನ ರಾಜ್ಯದ ಚಿಕ್ಕ ಅರಸೊಬ್ಬ ಬೃಹತ್ ಚೋಳ ಸಾಮ್ರಾಟನ ಮೇಲೆ ಜಯಗಳಿಸಿದುದು ನಿಜಕ್ಕೂ ಮಹತ್ತ್ವದ ಸಂಗತಿ. ಈ ಎಲ್ಲ ಸಾಧನೆಗಳಿಂದ 1117ರ ಒಂದು ಶಾಸನ ವಿವರಿಸುವಂತೆ ದಕ್ಷಿಣದಲ್ಲಿ ಚೇರಮನ ಮಲೆ, ಕೊಂಗು ವಿಷಯದಿಂದ ಹಿಡಿದು (ನೀಲಗಿರಿ, ಕೊಯಮತ್ತೂರು ಬಳಿಯ ಭಾಗಗಳು) ಉತ್ತರದಲ್ಲಿ ಸಾವಿಮಲೆಯ (ಬಳ್ಳಾರಿ ಜಿಲ್ಲೆ ಸಂಡೂರು) ವರೆಗೂ ಪೂರ್ವದಲ್ಲಿ ಸಂಗಲಿಘಟ್ಟದಿಂದ (ಕೋಲಾರ ಜಿಲ್ಲೆ ಮುಳಬಾಗಲು ನಂಗಲಿ) ಪಶ್ಚಿಮದಲ್ಲಿ ಬಾರಕನೂರು ಘಟ್ಟದ (ಸಹ್ಯಾದ್ರಿಯ ಪಶ್ಚಿಮ ಅಂಚು) ವರೆಗೂ ಹೊಯ್ಸಳ ರಾಜ್ಯ ವಿಸ್ತøತವಾಯಿತು. ಹಿಂದೆ ಗಂಗರ ಅನೂಚಾನ ಆಧಿಪತ್ಯಕ್ಕೊಳಪಟ್ಟಿದ್ದ ರಾಜ್ಯವೆಲ್ಲ, ವಿಷ್ಣುವರ್ಧನನ ಏಕಚ್ಛತ್ರದಡಿಗೆ ಬಂದು, ಹೊಯ್ಸಳರು ಗಂಗವಾಡಿ 96000ದ ನಾಯಕರೆಂಬ ಹೇಳಿಕೆಯೂ ಇವನ ವೀರಗಂಗನೆಂಬ ಬಿರುದೂ ಸಫಲವಾದುವು. ಚಾಳುಕ್ಯ 6ನೆಯ ವಿಕ್ರಮಾದಿತ್ಯ ಮೊದಲಿಗೆ ತನ್ನ ಸಾಮಂತರಾಗಿದ್ದ ಈ ಹೊಯ್ಸಳರ ಏಳ್ಗೆಯನ್ನು ಗಮನಿಸುತ್ತಲೇ ಬಂದಿದ್ದ. ಅವನು ತನ್ನ ರಾಜ್ಯದ ದಕ್ಷಿಣದಲ್ಲಿ ಪ್ರಬಲವಾಗುತ್ತಿದ್ದುದಲ್ಲದೆ ಹಿಂದೆ ಉಂಟಾದ ಚಾಳುಕ್ಯ-ಹೊಯ್ಸಳ ವಿರಸದಿಂದ ಹೆಚ್ಚುಕಡಿಮೆ ಸ್ವತಂತ್ರರಂತೆಯೇ ವರ್ತಿಸುತ್ತ, ನಿಷ್ಠಾವಂತ ಚಾಳುಕ್ಯ ಸಾಮಂತರಾಗಿದ್ದ ಉಚ್ಚಂಗಿ ಪಾಂಡ್ಯರ ಮೇಲೂ ಹೊಯ್ಸಳರ ದಾಳಿ ನಡೆದದ್ದನ್ನು ಸಹಿಸಲಿಲ್ಲ. 1118ರಲ್ಲಿ ವಿಷ್ಣುವರ್ಧನನನ್ನು ಬಗ್ಗಿಸಲು ಬೃಹತ್ ಸೈನ್ಯವೊಂದನ್ನು ಕಳುಹಿಸಿದಾಗ ಹೊಯ್ಸಳ ದಂಡನಾಯಕರು ಶೌರ್ಯದಿಂದ ಎದುರಿಸಿ, ಚಾಳುಕ್ಯ ಬಲವನ್ನು ಹಿಮ್ಮೆಟ್ಟಿಸಿದರು. ಚಾಳುಕ್ಯ ಶೃಂಖಲೆ ಮುರಿಯಿತು. ಹೊಯ್ಸಳ ಸಾರ್ವಭೌಮತ್ವ ಸಿದ್ಧವಾಯಿತು. ಮುಂದಿನ ವರ್ಷಗಳಲ್ಲಿ ವಿಷ್ಣುವರ್ಧನ ತಾನು ಗಳಿಸಿದ ನಾಡಿನ ಸುವ್ಯವಸ್ಥೆಗೆ ಗಮನ ಕೊಟ್ಟುದಲ್ಲದೆ ಅವಕಾಶ ಒದಗಿದಾಗ ಚಾಳುಕ್ಯ ರಾಜ್ಯದ ಒಳಕ್ಕೂ ತನ್ನ ಆಧಿಪತ್ಯವನ್ನು ವಿಸ್ತರಿಸಲು ಯತ್ನಿಸಿದ. ಈ ಕೆಲಸ ಸುಲಭಸಾಧ್ಯವಾಗಿರಲಿಲ್ಲ. ಆತ ಪ್ರತಿ ಹೆಜ್ಜೆಯಲ್ಲೂ ಚಾಳುಕ್ಯರು ಮತ್ತು ಅವರ ನಿಷ್ಠ ಸಾಮಂತರೊಡನೆ ಸತತ ಹೋರಾಟ ನಡೆಸಬೇಕಾಯಿತು. 6ನೆಯ ವಿಕ್ರಮಾದಿತ್ಯನ ಅನಂತರ ಬಂದ ಭೂಲೋಕಮಲ್ಲ ಅಷ್ಟೇನೂ ಶಕ್ತನಾಗಿರಲಿಲ್ಲವಾಗಿ ಅವನ ರಾಜ್ಯದಲ್ಲೇ ಸ್ವಹಿತ ಸಾಧಕರು ಬೆಳೆದಿದ್ದು, ಸ್ವಲ್ಪಮಟ್ಟಿಗೆ ವಿಷಮ ಪರಿಸ್ಥಿತಿಯೂ ಇದ್ದಿತಾದ್ದರಿಂದ ವಿಷ್ಣುವರ್ಧನ ಹಲವು ಸಂದರ್ಭಗಳಲ್ಲಿ ಹಾನುಗಲ್ಲಿನ ಕದಂಬರು ಮುಂತಾದವರನ್ನು ಸೋಲಿಸಿ ಕೃಷ್ಣಾ ನದಿಯ ವರೆಗೂ ಮುನ್ನಡೆದನಲ್ಲದೆ ತನ್ನ ಆಳಿಕೆಯ ಕೊನೆಯ ಘಟ್ಟದಲ್ಲಿ ಬೆಳ್ವೊಲ ಪ್ರಾಂತವನ್ನೆಲ್ಲ ಆಕ್ರಮಿಸಿ, ಬಂಕಾಪುರವನ್ನು ನೆಲೆವೀಡಾಗಿ ಮಾಡಿಕೊಂಡ. ಪ್ರಾಯಶಃ ಈ ಕಾಲದಲ್ಲಿ ದಕ್ಷಿಣದಲ್ಲಿದ್ದ ಚೋಳರೂ ಬಲಗುಂದಿದ್ದು, ಅತ್ತ ಕಡೆಯಿಂದ ಆಕ್ರಮಣ ಭಯವೂ ಇಲ್ಲದ್ದು, ಉತ್ತರದಲ್ಲಿ ಹೊಯ್ಸಳ ರಾಜ್ಯದ ವಿಸ್ತರಣೆಗೆ ಕಾರಣವಾಗಿರಬೇಕು. ವಿಷ್ಣುವರ್ಧನನ ಶೌರ್ಯ, ರಾಜಕೀಯ ಮುತ್ಸದ್ದಿತನ, ಇವನ ದಂಡನಾಯಕರು ಮತ್ತು ಸಾಮಂತರ ಅಚಲ ನಿಷ್ಠೆ-ಇವುಗಳಿಂದ ಹೊಯ್ಸಳರು ದಕ್ಷಿಣ ಭಾರತದ ರಾಜಕೀಯದ-ಚೋಳ-ಚಾಳುಕ್ಯರ ಜೊತೆಗೆ-ಇನ್ನೊಂದು ಮುಖ್ಯ ಬಲವಾಗಿ ನೆಲೆಗೊಂಡರು.			 (ನೋಡಿ- ವಿಷ್ಣುವರ್ಧನ-1)

	ವಿಷ್ಣುವರ್ಧನನ ಮರಣಾನಂತರ ಪಟ್ಟಕ್ಕೆ ಬಂದ ಅವನ ಮಗ ಒಂದನೆಯ ನರಸಿಂಹ (1142-73) ಇನ್ನೂ ಬಾಲಕನಾಗಿದ್ದುದರಿಂದಲೂ ಪ್ರಾಪ್ತವಯಸ್ಕನಾದಮೇಲೂ ಸ್ವಭಾವತಃ ಅಶಕ್ತನೂ ಸುಖಲೋಲುಪನೂ ಆಗಿದ್ದುದರಿಂದಲೂ ಚಾಳುಕ್ಯ ಜಗದೇಕಮಲ್ಲ ಮತ್ತು ಹಿಂದೆ ವಿಷ್ಣುವರ್ಧನನಿಂದ ಪೆಟ್ಟು ತಿಂದಿದ್ದ ಚಾಳುಕ್ಯ ಸಾಮಂತರು, ಹರಿಹರದಿಂದ ಉತ್ತರಕ್ಕಿದ್ದ ಹೊಯ್ಸಳರ ಗಳಿಕೆಯನ್ನೆಲ್ಲ ಕಬಳಿಸಿದರು. ಪೂರ್ವದಲ್ಲಿ ಚೋಳರೂ ಈಗಿನ ಕೋಲಾರ ಜಿಲ್ಲೆಯ ಸ್ವಲ್ಪಭಾಗವನ್ನು ಆಕ್ರಮಿಸಿದರು. ದಕ್ಷಿಣದಲ್ಲಿ ಚೆಂಗಾಳ್ವರು ಸಂದರ್ಭದ ಲಾಭಪಡೆಯಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲವಾದರೂ ನರಸಿಂಹನ ಕಾಲದಲ್ಲಿ ತಂದೆಯ ಬಾಹುಬಲದಿಂದ ವೃದ್ಧಿಸಿದ್ದ ಹೊಯ್ಸಳ ರಾಜ್ಯ ಸಂಕುಚಿತ ವಾಯಿತು. ನರಸಿಂಹ ಚಾಳುಕ್ಯ ಸಾರ್ವಭೌಮತ್ವವನ್ನೂ ಒಪ್ಪಬೇಕಾಯಿತು. ಪ್ರಾಯಶಃ ಈ ವಿಷಮ ಸ್ಥಿತಿಯಲ್ಲಿ ಹೊಯ್ಸಳ ರಾಜ್ಯ ಛಿದ್ರವಾಗದಿದ್ದುದು ಕೆಲವು ನಿಷ್ಠಾವಂತ ಹೊಯ್ಸಳ ದಂಡನಾಯಕರಿಂದಾಗಿ ಎನ್ನಬಹುದು. ಅಲ್ಲದೆ ಇವನ ಆಳಿಕೆಯ ಉತ್ತರಾರ್ಧದಲ್ಲಿ ಮಗನಾದ ಎರಡನೆಯ ಬಲ್ಲಾಳ ಆಡಳಿತದಲ್ಲಿ ಪಾಲ್ಗೊಂಡಿದ್ದೂ ಕಾರಣವಾಗಿರಬಹುದು. ಶಕ್ತನಾದ ಬಲ್ಲಾಳ ತಂದೆಯ ನಿರ್ಬಲ ಆಡಳಿತವನ್ನು ಸಹಿಸದೆ ದಂಗೆಯೆದ್ದು 1173ರಲ್ಲಿ ತಾನೇ ಸಿಂಹಾಸನವನ್ನೇರಿದ.

	ಎರಡನೆಯ ಬಲ್ಲಾಳ (1173-1220) ತನ್ನ ತಾತ ವಿಷ್ಣುವರ್ಧನನ ಗುರಿಯಾಗಿದ್ದ ಸಾಮ್ರಾಜ್ಯಸ್ಥಾಪನೆಯನ್ನು ಸಾಧಿಸುವ ಸಂಕಲ್ಪ ಮಾಡಿದ. ಅಧಿಕಾರಕ್ಕೆ ಬಂದಕೂಡಲೇ ರಾಜ್ಯದಲ್ಲಿ ತಲೆದೋರಿದ್ದ ಅರಾಜಕತೆಯನ್ನು ಹೋಗಲಾಡಿಸಿ ವಿಸ್ತರಣಾ ಕಾರ್ಯದಲ್ಲಿ ತೊಡಗಿದ. ವಿಷ್ಣುವರ್ಧನನ ಕಾಲದಲ್ಲಿ ಸಾಮಂತನಾಗಿ, ನರಸಿಂಹನ ಕಾಲದಲ್ಲಿ ಸ್ವತಂತ್ರನಾದ ಚೆಂಗಾಳ್ವ ರಾಜನನ್ನು ಹತ್ತಿಕ್ಕಿ (1173), 1177ರಲ್ಲಿ ಉಚ್ಚಂಗಿಯನ್ನು ಮುತ್ತಿ ಪಾಂಡ್ಯ ಕಾಮದೇವನನ್ನು ಸೋಲಿಸಿದ. ಅನಂತರ ಕಳಚುರಿಗಳ ಮೇಲೆ ಯುದ್ಧಮಾಡಿ ತುಂಗಭದ್ರಾನದಿಯ ಪ್ರದೇಶಗಳನ್ನು ವಶಪಡಿಸಿಕೊಂಡ. ಅದೇ ಸಮಯದಲ್ಲಿ ಸಿಂಧ ರಾಜನನ್ನೂ ಸಾಂತರರನ್ನೂ ಹಾನುಗಲ್ಲಿನ ಕದಂಬರನ್ನೂ ತುಳು ರಾಜನನ್ನೂ ಸೋಲಿಸಿದ. ಈ ವೇಳೆಗೆ ಚಾಳುಕ್ಯರ ಸಾಮಂತ ಪಕ್ಷವನ್ನು ವಹಿಸಿದ್ದ ಉಚ್ಚಂಗಿ ಕಾಮದೇವ ಪಾಂಡ್ಯನ ರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ (1187).

	ಸೋಮೇಶ್ವರ ಪುನಃ ಚಾಳುಕ್ಯರ ಅಧಿಕಾರವನ್ನು ಸ್ಥಾಪಿಸಿದರೂ ಕುಂತಳ ಸಾಮ್ರಾಜ್ಯದ ಅವನತಿಯ ಕುರುಹುಗಳು ಕಾಣಬಂದದ್ದರಿಂದ ವೀರಬಲ್ಲಾಳ 1189ರಲ್ಲಿ ಕಲ್ಯಾಣಿಯ ವರೆಗೂ ದಂಡೆತ್ತಿಹೋಗಿ ಸೋಮೇಶ್ವರನ ಪ್ರಧಾನ ದಂಡನಾಯಕನಾದ ಬ್ರಹ್ಮದಂಡೇಶನನ್ನು ಸೋಲಿಸಿ ಚಾಳುಕ್ಯ ಸಾಮ್ರಾಜ್ಯದ ದಕ್ಷಿಣಭಾಗದ ಮೇಲೆ ತನ್ನ ಆಳಿಕೆಯನ್ನು ಸ್ಥಾಪಿಸಿ ಕರ್ನಾಟಕ ಚಕ್ರವರ್ತಿಯೆಂಬ ಬಿರುದು ಧರಿಸಿದ. ಅನಂತರ ಕುಂತಳ ಸಾಮ್ರಾಜ್ಯದ ಒಡೆತನಕ್ಕಾಗಿ ದೇವಗಿರಿಯ ಸೇವುಣರಿಗೂ ಹೊಯ್ಸಳರಿಗೂ ಯುದ್ಧಗಳು ಪ್ರಾರಂಭವಾದುವು. ಸೇವುಣ ರಾಜನಾದ ಭಿಲ್ಲಮ ದಕ್ಷಿಣಕ್ಕೆ ಮುನ್ನುಗ್ಗಿದಾಗ ಬಲ್ಲಾಳ ಅವನನ್ನು ಸೊರಟೂರಿನ ಬಳಿಯಲ್ಲಿ ಎದುರಿಸಿ ಓಡಿಸಿದ (1190). ಸುತ್ತಲಿನ ಯಲಬುರ್ಗಿಯ ಸಿಂಧರೇ ಮೊದಲಾದ ಕಿರುದೊರೆಗಳನ್ನು ಜಯಿಸಿ ಹೊಯ್ಸಳ ರಾಜ್ಯವನ್ನು ಉತ್ತರದಲ್ಲಿ ಮಲಪ್ರಭಾ, ಕೃಷ್ಣಾನದಿಗಳ ವರೆಗೂ ವಿಸ್ತರಿಸಿದ. ತನ್ನ ಸಾಮ್ರಾಟ ಪದವಿಯ ಕುರುಹಾಗಿ 1192ರಲ್ಲಿ ತನ್ನ ಹೆಸರಿನಲ್ಲಿ ಶಕವೊಂದನ್ನು ಸ್ಥಾಪಿಸಿದ. 1173-92 ಬಲ್ಲಾಳನ ಆಳಿಕೆಯಲ್ಲಿ ನಿರಂತರ ಅಭಿವೃದ್ಧಿಯ ಕಾಲ. ಈ ಕಾಲದಲ್ಲಿ ಉತ್ತರ ಕರ್ನಾಟಕದ ರಾಜಕೀಯ ಶಕ್ತಿಗಳಾಗಿದ್ದ ಕಳಚುರಿಗಳು ಮತ್ತು ಚಾಳುಕ್ಯರು ಇತಿಹಾಸದಿಂದ ಮರೆಯಾದರಷ್ಟೆ. ಇದರಿಂದ ಅಲ್ಲಿ ಉದ್ಭವವಾದ ರಾಜಕೀಯ ಶೂನ್ಯತೆಯನ್ನು ಬಲ್ಲಾಳ ಚಾಕಚಕ್ಯತೆಯಿಂದ ತನಗೆ ಲಾಭದಾಯಕವಾಗಿ ಮಾಡಿಕೊಂಡ. ಆದರೆ ಅನಂತರದಲ್ಲಿ ಬಲ್ಲಾಳನ ಮುನ್ನಡೆ ಕುಂಠಿತವಾಯಿತು. ಮೊದಲಿಗೆ ಉತ್ತರ ಕರ್ನಾಟಕದ ಅನೇಕ ಚಿಕ್ಕ ರಾಜಮನೆತನಗಳೂ ಬಲ್ಲಾಳನಂತೆಯೇ ತತ್ಕಾಲದ ಸಾರ್ವಭೌಮ ಶೂನ್ಯತೆಯನ್ನು ಗಮನದಲ್ಲಿಟ್ಟು ಸ್ವಲಾಭನಿರತವಾಗಿದ್ದವು. ಹೊಸದಾಗಿ ಆ ಪ್ರದೇಶದಲ್ಲಿ ಕಾಲಿಟ್ಟಿದ್ದ ಬಲ್ಲಾಳನ ಸಾರ್ವಭೌಮತ್ವವನ್ನು ಸಹಿಸಲು ಒಪ್ಪಲಿಲ್ಲ. ಸಾಧ್ಯವಾದಷ್ಟುಮಟ್ಟಿಗೆ ಸ್ವತಂತ್ರ ರಾಜರಾಗಿರಲು ಅಲ್ಲಿಯ ಅರಸರು ಪ್ರಯತ್ನಿಸುತ್ತಿದ್ದರು. ಅಲ್ಲದೆ ದೇವಗಿರಿಯಲ್ಲಿ ಸಿಂಘಣ ಕ್ರಮೇಣ ಬಲಯುತನಾಗುತ್ತಿದ್ದ. ಬೆಳ್ವೊಲ, ಬನವಾಸಿ ಪ್ರಾಂತದಲ್ಲಿದ್ದ ಕೆಲವು ಚಿಕ್ಕ ರಾಜಮನೆತನಗಳಿಗೆ ಸಹಾಯ ಮಾಡುವ ನೆವದಲ್ಲಿ ದಕ್ಷಿಣ ದಂಡಯಾತ್ರೆಯನ್ನು ಕೈಕೊಂಡ. ಬೆಳ್ವೊಲ-ಬನವಾಸಿ ಪ್ರಾಂತದ ಆಧಿಪತ್ಯಕ್ಕಾಗಿ ದಖನ್ನಿನ ಎರಡು ಬಲಿಷ್ಠ ರಾಜರು ಪರಸ್ಪರ ವಿರುದ್ಧವಾಗಿ ನಿಂತರು. ಬಲ್ಲಾಳನಿಗೆ ಈ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲವಾಗಿ ತಾನು ಗಳಿಸಿದ ಉತ್ತರ ಕರ್ನಾಟಕದ ಭಾಗಗಳನ್ನು ಉಳಿಸಿಕೊಳ್ಳುವುದೇ ಪ್ರಯಾಸವಾಯಿತು. 1212ರ ವರೆಗೆ ಆ ನೆಲವನ್ನೆಲ್ಲ ಹಿಡಿತದಲ್ಲಿಟ್ಟು ಕೊಂಡಿದ್ದರೂ ಮುಂದೆ 1215ರ ಹೊತ್ತಿಗೆ ಸಿಂಘಣನ ಪ್ರಾಬಲ್ಯದಿಂದ ಬಲ್ಲಾಳ ತುಂಗಭದ್ರೆಯ ಉತ್ತರದ ಭಾಗವನ್ನೆಲ್ಲ ಕಳೆದುಕೊಂಡ. ಆದರೆ ಹೊಯ್ಸಳ ರಾಜ್ಯ ಭದ್ರವಾದ ಬುನಾದಿಯ ಮೇಲೆ ನಿಂತಿತ್ತು. ಸಿಂಘಣನಂಥ ಶೂರನ ಪ್ರಯತ್ನಗಳು, ಅದರ ಹೊರ ಎಲ್ಲೆಯನ್ನಷ್ಟೇ ಮುಟ್ಟಲು ಸಾಧ್ಯವಾಯಿತು.

	ಈ ವೇಳೆಗೆ ಶಕ್ತಯುತವಾಗಿ ಬೆಳೆದಿದ್ದ ಹೊಯ್ಸಳ ರಾಜ್ಯಕ್ಕೆ ಹೊಸ ವಿಸ್ತರಣ ಅವಕಾಶಗಳು ಬೆಳೆದು ಬಂದುವು. ಈ ಹಿಂದೆಯೇ ರಕ್ತಸಂಬಂಧವನ್ನು ಬೆಳೆಸಿದ್ದ ಚೋಳರೊಡನೆ ರಾಜಕೀಯ ಸಂಬಂಧವನ್ನು ಬೆಳೆಸಲಾಯಿತು. ಮೂರನೆಯ ಕುಲೋತ್ತುಂಗ ಚೋಳ ತನ್ನ ಸಾಮಂತ ರಾದ ಪಾಂಡ್ಯರಿಂದ ಪರಾಜಿತನಾದಾಗ, ಬಲ್ಲಾಳನ ಸಹಾಯವನ್ನು ಯಾಚಿಸಿದ. ಬಲ್ಲಾಳ ತನ್ನ ಕುಮಾರ ಎರಡನೆಯ ನರಸಿಂಹನ ನೇತೃತ್ವದಲ್ಲಿ ಹೊಯ್ಸಳ ಸೈನ್ಯವನ್ನು ಕುಲೋತ್ತುಂಗನ ಸಹಾಯಕ್ಕೆ ಕಳುಹಿಸಿದ. ನರಸಿಂಹ ರಾಜರಾಜನ ಶತ್ರುಗಳನ್ನು ಸೋಲಿಸಿ ಅವನನ್ನು ಚೋಳ ಸಿಂಹಾಸನದ ಮೇಲೆ ಕೂರಿಸಿದ. ಇದರಿಂದ ತಮಿಳುನಾಡಿನ ರಾಜಕೀಯದಲ್ಲಿ ಹೊಯ್ಸಳರ ಕೈವಾಡದ ನಾಂದಿಯಾಯಿತು. ಪಾಂಡ್ಯರಾಜ ಗಜಕೇಸರಿ, ಚೋಳರಾಜಪ್ರತಿಷ್ಠಾಪನಾಚಾರ್ಯ ಎಂಬ ಬಿರುದುಗಳನ್ನು ಬಲ್ಲಾಳ ಧರಿಸಿದ. ಇಮ್ಮಡಿ ವೀರಬಲ್ಲಾಳ ಹೊಯ್ಸಳ ಸಂತತಿಯ ಸಾಮ್ರಾಟರಲ್ಲೆಲ್ಲ ಅತ್ಯಂತ ಪರಾಕ್ರಮಿ. ನರಸಿಂಹನ ಕಾಲದಲ್ಲಿ ಮುದುರಿಹೋಗಿದ್ದ ಹೊಯ್ಸಳ ರಾಜ್ಯವನ್ನು ತನ್ನ ಬಾಹುಬಲಸಾಮಥ್ರ್ಯ ಹಾಗೂ ದೂರದೃಷ್ಟಿಯಿಂದ ವಿಸ್ತರಿಸಿ, ದಕ್ಷಿಣ ಭಾರತದ ರಾಜಕೀಯದಲ್ಲಿ ಹೊಯ್ಸಳ ವಂಶವನ್ನು ಒಂದು ಮುಖ್ಯ ಶಕ್ತಿಯಾಗಿ ರೂಪಿಸಿದ ಕೀರ್ತಿ ಈತನದು.

	ಇವನ ಮಗ ಎರಡನೆಯ ನರಸಿಂಹನ (1220-35) ಕಾಲದಲ್ಲಿ ಈ ಹಿಂದೆ ಬಲ್ಲಾಳ ಸ್ಥಾಪಿಸಿದ್ದ ಸಾಮ್ರಾಜ್ಯ ಭದ್ರಪಟ್ಟುದಲ್ಲದೆ ಅಂದು ತಮಿಳುನಾಡಿನಲ್ಲಿ ಆಳುತ್ತಿದ್ದ ಚೋಳರು ಬಹಳ ಬಲಹೀನರಾಗಿ, ಪಾಂಡ್ಯರೇ ಮೊದಲಾದವರಿಂದ ಪೀಡಿತರಾಗಿದ್ದು, ಹಲವು ಸಂದರ್ಭಗ ಳಲ್ಲಿ ರಾಜ್ಯವನ್ನೂ ಕಳೆದುಕೊಂಡಿದ್ದರು. ಬಲ್ಲಾಳನ ಕಾಲದಿಂದಲೂ ಬೆಳೆದುಬಂದಿದ್ದ ಚೋಳ-ಹೊಯ್ಸಳ ರಕ್ತಸಂಬಂಧ ಮತ್ತು ತತ್ಕಾಲೀನ ತಮಿಳುನಾಡಿನ ಅಸ್ತವ್ಯಸ್ತ ಸ್ಥಿತಿಯನ್ನು ಚಾಕಚಕ್ಯತೆಯಿಂದ, ಬಳಸಿಕೊಂಡ ನರಸಿಂಹ, ಹಲವು ಬಾರಿ ತಮಿಳುನಾಡಿಗೆ ನುಗ್ಗಿ ಚೋಳವೈರಿಗಳನ್ನು ಸದೆ ಬಡಿದು ಚೋಳರಿಗೆ ರಾಜ್ಯ ದಕ್ಕಿಸಿಕೊಟ್ಟ. ಚೋಳರು ಕೃತಜ್ಞತೆಯಿಂದ ಪ್ರಾಯಶಃ ನರಸಿಂಹನ ರಾಜಕೀಯ ಚಾತುರ್ಯದಿಂದಲೂ ಇರಬಹುದು, ತಮಿಳುನಾಡಿನ ಕೊಯಮತ್ತೂರು, ತಿರುಚ್ಚಿರಾಪಳ್ಳಿ ಜಿಲ್ಲೆಯ ಹಲವು ಭಾಗಗಳನ್ನು ಹೊಯ್ಸಳರಿಗೆ ವಹಿಸಿಕೊಟ್ಟರು. ಇದರಿಂದಾಗಿ ನರಸಿಂಹನ ಕಾಲದಲ್ಲಿ ಹೊಯ್ಸಳ ರಾಜ್ಯ ತಮಿಳುನಾಡಿಗೂ ವಿಸ್ತರಿಸಿತು. ಇತ್ತ ರಾಜ್ಯವಿಸ್ತರಣೆಯಾದರೂ ಉತ್ತರದಲ್ಲಿ ಸೇವುಣರ ದಾಳಿಗಳು ಮುಂದುವರಿಯುತ್ತಲೇ ಇದ್ದುವು. ಆದರೂ ರಾಜ್ಯದ ಉತ್ತರ ದಕ್ಷಿಣದ ಎರಡು ಕಡೆಗಳಲ್ಲೂ ಸೈನ್ಯಾಚರಣೆಯಲ್ಲಿ ನಿರತನಾಗಿ ಹೊಯ್ಸಳ ರಾಜ್ಯವನ್ನು ಗಟ್ಟಿಯಾಗಿ ಉಳಿಸಿದ್ದಲ್ಲದೆ ದಕ್ಷಿಣದಲ್ಲಿ ವಿಸ್ತರಿಸಿದ್ದು ಎರಡನೆಯ ನರಸಿಂಹನ ಮುಖ್ಯ ಸಾಧನೆ. ಈ ಕಾಲದಿಂದ ಹೊಯ್ಸಳ ಪ್ರಭಾವ ತಮಿಳುನಾಡಿನಲ್ಲಿ ಭದ್ರವಾಗಿ ನೆಲೆಯೂರಿದ್ದೂ ಗಮನಾರ್ಹ ಅಂಶ.

	ನರಸಿಂಹನ ಮಗ ಸೋಮೇಶ್ವರ (1235-53) ತತ್ಕಾಲೀನ ರಾಜಕೀಯ ದಲ್ಲಿ ಹೇಳಿಕೊಳ್ಳುವ ಚಾಕಚಕ್ಯತೆಯನ್ನೇನೂ ತೋರಿಸಲಿಲ್ಲ. ಇವನು ಹೆಚ್ಚಾಗಿ ತಮಿಳುನಾಡಿನಲ್ಲೇ ಇರುತ್ತಿದ್ದುದರಿಂದ ಹೊಯ್ಸಳ ರಾಜ್ಯದ ಉತ್ತರದಲ್ಲಿ ಸೇವುಣರು ಸಾಕಷ್ಟು ಬಲಸಂವರ್ಧನೆ ಮಾಡಿಕೊಂಡಂತೆ ತೋರುತ್ತದೆ. ಆದರೆ ಹೊಯ್ಸಳ ರಾಜ್ಯಕ್ಕೇನೂ ಹೆಚ್ಚು ಧಕ್ಕೆಯಾಗಲಿಲ್ಲ. ಲಾಭವಂತೂ ಸಾಧ್ಯವೇ ಇರಲಿಲ್ಲ. ತಮಿಳುನಾಡಿನಲ್ಲಿ ಅಂದಿನ ರಾಜಕೀಯ ಸಮತೋಲ ಅಸ್ತವ್ಯಸ್ತವಾದ್ದರಿಂದ ಹಲವು ಯುದ್ಧಗಳಲ್ಲಿ ಈತ ಭಾಗವಹಿಸಬೇಕಾಯಿತು. ಇವನು ಚೋಳರೊಡನೆಯೇ ಅಲ್ಲದೆ ಅವರ ವೈರಿಗಳಾಗಿದ್ದ ಪಾಂಡ್ಯರೊಡನೆಯೂ ರಕ್ತಸಂಬಂಧ ಬೆಳೆಸಿದ್ದ; ಈ ಎರಡು ವಂಶದವರ ಶಾಸನಗಳೂ ಸೋಮೇಶ್ವರನನ್ನು ಮಾವ ಎಂದು ಹೆಸರಿಸುತ್ತವೆ. ಆದರೆ ಇದನ್ನೇ ಲಾಭ ಮಾಡಿಕೊಂಡ ಸೋಮೇಶ್ವರ, ಇಬ್ಬರಲ್ಲಿ ಯುದ್ಧವಾದಾಗ ಯಾವ ಒಂದು ಕಡೆಗೂ ಒಲವು ತೋರಿಸದೆ, ಇಬ್ಬರನ್ನೂ ನಿಗ್ರಹಿಸಿ ಹೊಯ್ಸಳ ಪ್ರಭಾವವನ್ನು ತಮಿಳುನಾಡಿನಲ್ಲೆಲ್ಲ ಹರಡಿ ಆ ದೇಶದ ಪ್ರಬಲಶಕ್ತಿಯಾದದ್ದು ಇವನ ಮುಖ್ಯ ಸಾಧನೆ. ಈ ಕಾಲದಲ್ಲಿ ಹೊಯ್ಸಳ ರಾಜ್ಯ ಬಹು ವಿಸ್ತಾರವಾಗಿದ್ದುದರಿಂದಲೂ ಇವನ ಮಕ್ಕಳಾದ 3ನೆಯ ನರಸಿಂಹ ಮತ್ತು ವೀರ ರಾಮನಾಥರಲ್ಲಿ ಸಾಮರಸ್ಯವಿಲ್ಲದ್ದರಿಂದಲೂ ಸೋಮೇಶ್ವರ ತನ್ನ ಆಳಿಕೆಯ ಕಡೆಯ ಭಾಗದಲ್ಲಿ ರಾಜ್ಯವನ್ನು ಇಬ್ಭಾಗ ಮಾಡಿ ಹಂಚಿದ.

	ಹೊಯ್ಸಳ ರಾಜ್ಯದ ಕರ್ನಾಟಕ ಭಾಗವನ್ನು ಆಳುತ್ತಿದ್ದ 3ನೆಯ ನರಸಿಂಹನ (1253-92) ಕಾಲದಲ್ಲಿ ಇವನಿಗೂ ಇವನ ಮಲತಮ್ಮನಾದ ವೀರರಾಮನಾಥನಿಗೂ ನಡೆದ ದಾಯಾದಿ ಕಲಹಗಳಷ್ಟೇ ಪ್ರಮುಖವಾಗಿ ಕಂಡುಬರುತ್ತವೆ. ಹಲವು ಬಾರಿ ಸೇವುಣ ರಾಮಚಂದ್ರ ಮತ್ತು ಮಹಾದೇವ ಹೊಯ್ಸಳ ರಾಜ್ಯವನ್ನು ಕಬಳಿಸಲು ಪ್ರಯತ್ನಿಸಿದರಾದರೂ ಸಫಲರಾಗಲಿಲ್ಲ.

	ಅತ್ತ ವಿಕ್ರಮಪುರದಿಂದ ಹೊಯ್ಸಳ ರಾಜ್ಯದ ತಮಿಳು ಭಾಗಗಳನ್ನು ಆಳುತ್ತಿದ್ದ ವೀರರಾಮನಾಥನಾದರೋ(1253-95) ತನ್ನ ಆಳಿಕೆಯ ಪ್ರಾರಂಭದಲ್ಲೇ ಮಧುರೆಯ ಜಟಾವರ್ಮನ್ ಸುಂದರಪಾಂಡ್ಯನಿಂದ ಪರಾಜಿತನಾಗಿ ತನ್ನ ರಾಜ್ಯದ ಹೆಚ್ಚು ಪ್ರದೇಶಗಳನ್ನು ಕಳೆದುಕೊಂಡು ಹೊಸೂರು ಬಳಿಯ ಕುಂದಾಣಿಯನ್ನು ರಾಜಧಾನಿಯಾಗಿ ಮಾಡಿಕೊಂಡ. ತನ್ನ ಸಹೋದರ ನರಸಿಂಹನಿಗೆ ಸೇರಿದ ಪ್ರದೇಶಗಳನ್ನು ಅನೇಕ ವೇಳೆ ಮುತ್ತುವುದಷ್ಟೇ ಆತ ಜೀವನಪರ್ಯಂತ ನಡೆಸಿದ ಕೆಲಸ. ರಾಮನಾಥ ಮತ್ತು ನರಸಿಂಹರ ಕಾಲದಲ್ಲಿ ಹೊಯ್ಸಳರು ತಮಿಳುನಾಡಿನ ಮೇಲೆ ಹೊಂದಿದ್ದ ಪ್ರಭುತ್ವಕ್ಕೆ ಚ್ಯುತಿ ಬಂದಿತು.

	ಮೂರನೆಯ ನರಸಿಂಹನ ಮಗ ಮೂರನೆಯ ಬಲ್ಲಾಳನ (1292-1343) ಆಳಿಕೆಯ ಮೊದಲೆರಡು ದಶಕಗಳು ಆಶಾದಾಯಕವಾಗಿದ್ದುವು. ಈತ ಪಟ್ಟಕ್ಕೆ ಬಂದ ಕೂಡಲೇ ದಾಯಾದಿ ಕಲಹದಿಂದ ಅಧೋಗತಿಗೆ ಇಳಿದಿದ್ದ ರಾಜ್ಯವನ್ನು ಸುಭದ್ರಸ್ಥಿತಿಗೆ ತರಲು ಯತ್ನಿಸಿದ. 1301ರ ವೇಳೆಗೆ ರಾಮನಾಥನ ಆಡಳಿತದಲ್ಲಿ ಇದ್ದ ಪ್ರದೇಶಗಳನ್ನು ಪೂರ್ಣವಾಗಿ ವಶಪಡಿಸಿಕೊಂಡು ಹೋಳಾಗಿದ್ದ ರಾಜ್ಯವನ್ನು ಒಂದುಗೂಡಿಸಿದ. 1302ರ ಹೊತ್ತಿಗೆ ಸೇವುಣರ ಮೇಲೂ ಯುದ್ಧಹೂಡಿ ರಾಜ್ಯದ ಉತ್ತರದ ಗಡಿಯನ್ನು ಭದ್ರಪಡಿಸಿ, ಹೊಯ್ಸಳ ರಾಜ್ಯದ ಹಿಂದಿನ ಪ್ರಭಾವೀಸ್ಥಿತಿಯನ್ನು ಸಾಧಿಸಿದ. ಆದರೆ ಬಲ್ಲಾಳನ ಕಾಲ ದಕ್ಷಿಣ ಭಾರತದ ಇತಿಹಾಸದಲ್ಲಿ ಸಂದಿಗ್ಧಕಾಲ. ಅತ್ತ ಉತ್ತರ ಭಾರತದಲ್ಲಿ ಮುಸಲ್ಮಾನ ಅರಸರು ಪ್ರಬಲರಾಗಿ ದಕ್ಷಿಣ ಭಾರತದ ಮೇಲೂ ಕಣ್ಣು ಹಾಯಿಸುವ ಸ್ಥಿತಿಗೇರಿದ್ದರು.

	1310ರ ವೇಳೆಗೆ ಅಲಾಉದ್ದೀನ್‍ನ ಅಪ್ಪಣೆಯ ಮೇರೆಗೆ ಅವನ ದಂಡನಾಯಕನಾದ ಮಲ್ಲಿಕ್ ಕಾಫರ್ ದೇವಗಿರಿಯ ಸೇವುಣರನ್ನು ಸೋಲಿಸಿ ಕರ್ನಾಟಕ ಮತ್ತು ತಮಿಳುನಾಡುಗಳನ್ನು ಜಯಿಸಿ ಅಪರಿಮಿತ ಐಶ್ವರ್ಯವನ್ನು ದೋಚುವುದಕ್ಕಾಗಿ ದೋರಸಮುದ್ರದತ್ತ ಮುಂದುವರಿದ. ಇವನು ಹೊಯ್ಸಳ ರಾಜ್ಯದ ಗಡಿಗಳನ್ನು ಪ್ರವೇಶಿಸುತ್ತಿದ್ದ ಸಮಯದಲ್ಲಿ ಬಲ್ಲಾಳ ತಮಿಳುನಾಡಿನಲ್ಲಿ ತನ್ನ ಪ್ರಭಾವ ಸ್ಥಾಪಿಸುವ ಯತ್ನದಲ್ಲಿದ್ದ. ಹಲವು ಭಾಗಗಳು ಶತ್ರುಗಳ ದಾಳಿಗೆ ಸಿಕ್ಕಿ ಪಾಳುಬಿದ್ದವು. ಬಲ್ಲಾಳ ಈ ವಿಷಮ ಪರಿಸ್ಥಿತಿಯಿಂದ ಪಾರಾಗಲು ಕಾಫರನಿಗೆ ವಿಶೇಷ ಐಶ್ವರ್ಯವನ್ನು ನೀಡಿ ಒಪ್ಪಂದ ಮಾಡಿಕೊಂಡ. ಮಹಮ್ಮದೀಯ ದಾಳಿ ಕೇವಲ ಆಕಸ್ಮಿಕವೆಂದು ಭಾವಿಸಿದ್ದ ಬಲ್ಲಾಳ ಪುನಃ ಹಳೆಯ ರಾಜಕೀಯ ಅಂತರ್ಯುದ್ಧಗಳಲ್ಲಿ ತೊಡಗಿದ. ತಮಿಳುನಾಡಿನಲ್ಲಿ ಪಾಂಡ್ಯವಂಶದ ಈರ್ವರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾಗ, ಒಬ್ಬನಿಗೆ ಬೆಂಬಲ ನೀಡಿ ಅವನಿಗೆ ರಾಜ್ಯ ದಕ್ಕಿಸಿಕೊಟ್ಟು, ಈ ಸಂದರ್ಭದಲ್ಲಿ ತಿರುವಣ್ಣಾಮಲೈ ಮತ್ತು ಸುತ್ತಲಿನ ಪ್ರದೇಶಗಳನ್ನು ಹೊಯ್ಸಳ ರಾಜ್ಯಕ್ಕೆ ಸೇರಿಸಿಕೊಂಡ. ಆದರೆ ಮಹಮ್ಮದೀಯರ ಉತ್ಕರ್ಷವನ್ನು ಗಮನಿಸಿ ದಕ್ಷಿಣ ಭಾರತದ ತಮ್ಮ ಆಳಿಕೆಯನ್ನು ಭದ್ರಪಡಿಸಿಕೊಳ್ಳಲು ಒಟ್ಟುಗೂಡಿ ಸತತ ಪ್ರಯತ್ನವನ್ನು ನಡೆಸಬೇಕಾಗಿದ್ದ ಈ ಕಾಲದಲ್ಲಿ ಅಂತರ್ಯುದ್ಧದಲ್ಲಿ ತೊಡಗಿ ಎಲ್ಲರೂ ಬಲಹೀನರಾಗುತ್ತಿದ್ದುದು ಮುಂದಿನ ರಾಜಕೀಯ ದುರಂತಕ್ಕೆ ದಾರಿಯಾಯಿತು. 1325ರಲ್ಲಿ ಪುನಃ ಉತ್ತರದಿಂದ ಉಪದ್ರವ ತಲೆದೋರಿತು. ಆ ವೇಳೆಗೆ ದೆಹಲಿಯ ಸಾಮ್ರಾಟನಾಗಿದ್ದ ಮಹಮ್ಮದ್ ಬಿನ್ ತುಗಲಕ್ ದಖನ್ ಪ್ರಸ್ಥಭೂಮಿಯವರೆಗೂ ರಾಜ್ಯ ವಿಸ್ತರಿಸಿದ್ದ. ತನ್ನ ವಿರುದ್ಧ ದಂಗೆಯೆದ್ದ ಬಹಾಉದ್ದೀನನನ್ನು ಸೆರೆಹಿಡಿಯಲು ಮಹಮ್ಮದ್ ಬಿನ್ ತುಗಲಕ್ ಕಳುಹಿಸಿದ ಸೈನ್ಯದಿಂದ ಓರಂಗಲ್ ಮತ್ತು ಕಂಪಿಲಿಯ ರಾಜಮನೆತನಗಳು ನಿರ್ನಾಮವಾದುವು. ಬಹಾಉದ್ದೀನನನ್ನು ಮಹಮ್ಮದ್ ಬಿನ್ ತುಗಲಕನ ಸೈನ್ಯಕ್ಕೆ ಒಪ್ಪಿಸಿ ವೀರಬಲ್ಲಾಳ ಮಹಮದೀಯರ ಆಕ್ರಮಣದಿಂದ ತನ್ನ ರಾಜ್ಯವನ್ನು ಪಾರುಮಾಡಿದ.

ಚಿತ್ರ-ಹೊಯ್ಸಳರ-ವಂಶಾವಳಿ

ಅನಂತರ ಬಲ್ಲಾಳ ಮಹಮ್ಮದೀಯ ರಾಜ್ಯಗಳ ನಿಜಶಕ್ತಿಯನ್ನು ಅರಿತಂತೆ ತೋರುತ್ತದೆ. ಅನಂತರ ತನ್ನ ರಾಜ್ಯದ ಗಡಿಗಳಲ್ಲಿ ಉಪರಾಜಧಾನಿಗಳನ್ನು ಸ್ಥಾಪಿಸಿ ರಕ್ಷಣೆಗಾಗಿ ಸೈನ್ಯದ ತುಕಡಿಗಳನ್ನು ನೇಮಿಸಿದ. ಇವನು ಶಕ್ತಿಯುತನಾಗಿ ಪಶ್ಚಿಮ-ಪೂರ್ವ ಸಮುದ್ರ ಪರ್ಯಂತ ರಾಜ್ಯವನ್ನು ಅನುಭವಿಸುತ್ತಿದ್ದರೂ ಉತ್ತರದಲ್ಲಿ ದೇವಗಿರಿಯಲ್ಲೂ ದಕ್ಷಿಣದಲ್ಲಿ ಮಧುರೆಯಲ್ಲೂ ಮುಸಲ್ಮಾನ ರಾಜ್ಯಗಳು ನೆಲೆಗೊಂಡಿದ್ದುವು. ಬಲ್ಲಾಳ ಉತ್ತರದಿಂದ ಬಂದ ಈ ಹೊಸ ರಾಜಕೀಯ ಶಕ್ತಿಯನ್ನು ಎದುರಿಸಲು ಇಲ್ಲಿ ಉಳಿದಿದ್ದ ಏಕೈಕ ರಾಜನಾಗಿದ್ದ. ಆದರೆ ಕಾಲಕ್ಕೆ ತಕ್ಕ ಹೊಸ ರಾಜನೀತಿಯನ್ನು ರೂಪಿಸಿಕೊಳ್ಳುವ ಇವನ ಕ್ರಮ ಬಹು ತಡವಾಗಿ ಹುಟ್ಟಿತು.

	ಬಲ್ಲಾಳ ಅಪರಿಮಿತ ಸೈನ್ಯದೊಡನೆ 1342ರಲ್ಲಿ ತಮಿಳುನಾಡಿಗೆ ಹೋದ. ಕೊಪ್ಪಂ ಕಣ್ಣಾನೂರಿನ ಬಳಿಯಲ್ಲಿ ಮಧುರೆಯ ಸುಲ್ತಾನನ ಸೈನ್ಯಕ್ಕೂ ಹೊಯ್ಸಳ ಸೈನ್ಯಕ್ಕೂ ಕದನ ನಡೆದು ಮಹಮ್ಮದೀಯ ಸೈನ್ಯ ಸೋಲನ್ನು ಅನುಭವಿಸಿದರೂ ಶತ್ರುಗಳ ಕುತಂತ್ರದಿಂದ ಬಲ್ಲಾಳ ಅವರ ಸೆರೆಯಾದ, ಕೊನೆಗೆ ಬಲಿಯಾದ (1343).

	ಹೊಯ್ಸಳ ಸಾಮ್ರಾಜ್ಯ ಅಸ್ತಂಗತವಾಯಿತು. ಇವನ ಮಗ ವಿರೂಪಾಕ್ಷ ಪಟ್ಟವೇರಿದರೂ ತನ್ನ ನಿರ್ಬಲತೆಯಿಂದಾಗಿ ಕೆಲವೇ ವರ್ಷಗಳಲ್ಲಿ ರಾಜಕೀಯದಿಂದ ಕಣ್ಮರೆಯಾದ. ಆದರೆ ಮೂರನೆಯ ಬಲ್ಲಾಳ ತನ್ನ ಆಳಿಕೆಯ ಕೊನೆಯ ಭಾಗದಲ್ಲಿ ದಕ್ಷಿಣದಲ್ಲಿ ಹಿಂದು ರಾಜ್ಯವನ್ನು ಸ್ಥಾಪಿಸಲು ಹೊಂದಿದ್ದ ಉದ್ದೇಶದ ಬೀಜ ಬಲವಾಗಿ ಬೇರೂರಿ 1336ರಲ್ಲಿ ಹುಟ್ಟಿದ ವಿಜಯನಗರ ಸಾಮ್ರಾಜ್ಯದಲ್ಲಿ ಫಲ ನೀಡಿತು.

	ಆಡಳಿತ ವ್ಯವಸ್ಥೆ : ಪ್ರಾರಂಭದ ಹೊಯ್ಸಳ ಪ್ರಭುಗಳು ತಲಕಾಡಿನ ಗಂಗರ ಮತ್ತು ಕಲ್ಯಾಣ ಚಾಳುಕ್ಯರ ಆಡಳಿತ ಪದ್ಧತಿಯನ್ನು ಅಳವಡಿಸಿ ಕೊಂಡಿದ್ದರು. ಮುಂದೆ ರಾಜ್ಯ ವಿಸ್ತಾರವಾಗಿ, ಆಡಳಿತದ ಭಾರ ಹೆಚ್ಚಾಗುತ್ತಿದ್ದಂತೆ ಆಯಾ ಸಂದರ್ಭಕ್ಕೆ ಅನುಕೂಲವಾಗುವಂತೆ, ಮೂಲ ವ್ಯವಸ್ಥೆಗೆ ಭಂಗ ಬರದ ರೀತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡಿದ್ದೂ ಉಂಟು.

	ರಾಜ್ಯಾಡಳಿತ ಮೂರು ಘಟ್ಟಗಳಲ್ಲಿ ನಡೆಯುತ್ತಿತ್ತು. ಎಲ್ಲಕ್ಕೂ ಉನ್ನತ ಘಟ್ಟದಲ್ಲಿ ಇಡೀ ರಾಜ್ಯದ ಮೇಲೆ ಅಧಿಕಾರವನ್ನು ಚಲಾಯಿಸುತ್ತಿ ದ್ದವನು ಚಕ್ರವರ್ತಿ. ಈ ರಾಜ್ಯದ ಅನೇಕ ಸಣ್ಣ ವಿಭಾಗಗಳಾಗಿ ವಿಂಗಡಿತವಾಗಿದ್ದು, ಅವುಗಳ ಮೇಲೆ ರಾಜನ ಸಂಬಂಧಿಗಳೋ ದಂಡನಾಯಕರೋ ಅಥವಾ ಸಾಮಂತ ರಾಜವಂಶದವರೋ ಅಧಿಕಾರ ನಡೆಸುತ್ತಿದ್ದರು. ಈ ಪ್ರಾಂತಗಳಲ್ಲಿದ್ದ ಗ್ರಾಮಗಳಲ್ಲಿ ಒಂದೊಂದಕ್ಕೂ ಪ್ರತ್ಯೇಕವಾದ ಸ್ಥಳೀಯ ಆಡಳಿತ ಸಂಸ್ಥೆಗಳಿರುತ್ತಿದ್ದುವು.

	ರಾಜ ಆಡಳಿತದ ಸರ್ವಶ್ರೇಷ್ಠ ಅಧಿಕಾರಿಯಾಗಿದ್ದ. ರಾಜತ್ವ ವಂಶಪಾರಂಪರ್ಯವಾಗಿತ್ತು. ಹಿರಿಯ ಮಗ ಉತ್ತರಾಧಿಕಾರಿಯಾಗುತ್ತಿದ್ದ. ಮಂತ್ರಿಗಳನ್ನೂ ಸೇನಾಧಿಕಾರಿಗಳನ್ನೂ ಆಡಳಿತ ಯಂತ್ರದ ಇತರ ಉಚ್ಚ ಅಧಿಕಾರಿಗಳನ್ನೂ ಆರಿಸುವುದು ರಾಜನ ಕರ್ತವ್ಯವಾಗಿತ್ತು. ರಾಜನು ಸವೋಚ್ಚ ಸೇನಾನಿಯೂ ನ್ಯಾಯಾಧಿಪತಿಯೂ ಆಗಿರುತ್ತಿದ್ದ. ಆದರೆ ಸ್ವೇಚ್ಛಾಧಿಕಾರಿಯಾಗಿರುತ್ತಿರಲಿಲ್ಲ. ಪರಂಪರಾನುಗತವಾದ ಪದ್ಧತಿಗಳು, ಧರ್ಮ, ಮಂತ್ರಿ ಪರಿಷತ್ತು ಮತ್ತು ಇತರ ಅಂಗವ್ಯವಸ್ಥೆಗಳು ರಾಜನ ಸ್ವೇಚ್ಛಾಧಿಕಾರಕ್ಕೆ ಇದ್ದ ತಡೆಗಳಾಗಿದ್ದವು. ಹೊಯ್ಸಳ ರಾಜರು ಧರ್ಮಶಾಸ್ತ್ರಕ್ಕನುಗುಣವಾಗಿ ಆಡಳಿತ ನಡೆಸುವುದು ತಮ್ಮ ಕರ್ತವ್ಯವೆಂದು ನಂಬಿದ್ದರು. ಅನೇಕಾನೇಕ ಶಾಸನಗಳಲ್ಲಿ ಮನು, ಯಾಜ್ಞವಲ್ಕ್ಯ, ಕೌಟಿಲ್ಯ ಮೊದಲಾದ ರಾಜನೀತಿಕರ್ತೃಗಳನ್ನು ಸ್ಮರಿಸಲಾಗಿದೆ. ರಾಜ್ಯ ಸಪ್ತಾಂಗಗ ಳಿಂದ ಕೂಡಿದುದೆಂಬ ನಂಬಿಕೆಯಿತ್ತು. ದುಷ್ಟಶಿಕ್ಷಣ, ಶಿಷ್ಟರಕ್ಷಣ ರಾಜನ ಪ್ರಮುಖ ಕರ್ತವ್ಯವೆಂಬ ನಂಬಿಕೆಯಿತ್ತು. ರಾಜ ಆಗಾಗ ರಾಜ್ಯದಲ್ಲಿ ಸಂಚರಿಸಿ ಪ್ರಜೆಗಳ ಕುಂದುಕೊರತೆಗಳನ್ನು ನಿವಾರಿಸುವುದಲ್ಲದೆ ಗ್ರಾಮ ಮುಂತಾದ ರಾಜ್ಯದ ಉಪಾಂಗಗಳಲ್ಲಿ ಉದ್ಭವಿಸಿದ ಸಮಸ್ಯೆಗಳನ್ನೂ ಪರಿಹರಿಸುತ್ತಿದ್ದ; ಕೆರೆಕಾಲುವೆಗಳನ್ನು ಕಟ್ಟಿಸಿ ಅಗ್ರಹಾರಗಳನ್ನು ಸ್ಥಾಪಿಸಿ ವ್ಯವಸಾಯ, ವ್ಯಾಪಾರ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದ. ಹೊಯ್ಸಳ ರಾಜರು ಯುದ್ಧಗಳಲ್ಲಿ ಸ್ವತಃ ಸೈನ್ಯವನ್ನು ನಡೆಸಿ ಪರಾಕ್ರಮದಿಂದ ಹೋರಾಡಿ ಸೈನಿಕರಿಗೆ ಸ್ಫೂರ್ತಿ ನೀಡುತ್ತಿದ್ದರು. ವೀರಯೋಧರನ್ನು ಸನ್ಮಾನಿಸುತ್ತಿದ್ದರು.

	ಹೊಯ್ಸಳರ ಆಡಳಿತ ವ್ಯವಸ್ಥೆಯಲ್ಲಿ ರಾಣಿಯರು ಜವಾಬ್ದಾರಿಯುತ ವಾದ ಪಾತ್ರವನ್ನು ವಹಿಸುತ್ತಿದ್ದರು. ಪಟ್ಟಮಹಿಷಿ ಮತ್ತು ಇತರ ರಾಣಿಯರು ವಿಷ್ಣುವರ್ಧನನ ಆಳಿಕೆಯ ಪ್ರಾರಂಭದಿಂದ ಹೊಯ್ಸಳ ಸಂತತಿಯ ಕೊನೆಯವರೆಗೂ ಆಡಳಿತದಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ನಿದರ್ಶನಗಳು ಶಾಸನಗಳಿಂದ ತಿಳಿದುಬರುತ್ತವೆ.

	ಉತ್ತರಾಧಿಕಾರಿಯಾಗಲಿದ್ದ ಹಿರಿಯ ಮಗನಿಗೆ ಬಾಲ್ಯದಲ್ಲಿಯೇ ಅಥವಾ ಹುಟ್ಟಿದಂದಿನಿಂದಲೇ ಯುವರಾಜ್ಯಾಭಿಷೇಕ ಮಾಡುವುದು ಹೊಯ್ಸಳ ಸಂತತಿಯಲ್ಲಿ ಆಚರಣೆಯಲ್ಲಿತ್ತು. ಯುವರಾಜನಿಗೆ ಯೋಗ್ಯ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿತ್ತು. ಪ್ರಾಪ್ತವಯಸ್ಕನಾದ ಕೂಡಲೇ ಅವನನ್ನು ಪ್ರಾಂತಾಧಿಕಾರಿಯಾಗಿ ನೇಮಿಸುತ್ತಿದ್ದರು. ಅವನು ಯುದ್ಧಗ ಳಲ್ಲಿ ಭಾಗವಹಿಸಬೇಕಾಗಿತ್ತು. ಈ ಪದ್ಧತಿಯಿಂದ ಮುಂದೆ ರಾಜನಾಗುವ ಹೊತ್ತಿಗೆ ವ್ಯಕ್ತಿಗೆ ಆಡಳಿತ ಮತ್ತು ಯುದ್ಧವಿದ್ಯೆಯಲ್ಲಿ ಹೆಚ್ಚು ಪರಿಶ್ರಮ ಪಡೆಯಲು ಅನುಕೂಲವಾಗಿದ್ದುದಲ್ಲದೆ ಸಿಂಹಾಸನಕ್ಕಾಗಿ ಅಂತರ್ಯುದ್ಧ ಗಳು ನಡೆಯದಂತೆ ಏರ್ಪಾಡುಗಳನ್ನು ಕಲ್ಪಿಸಿದಂತಾಗುತ್ತಿತ್ತು.

	ರಾಜ್ಯದ ಮುಖ್ಯ ಸಮಸ್ಯೆಗಳನ್ನೂ ನ್ಯಾಯ ತೀರ್ಮಾನಕ್ಕೆ ಸಂಬಂಧಿಸಿದ ಕ್ಲಿಷ್ಟ ಸಮಸ್ಯೆಗಳನ್ನೂ ಮಂತ್ರಾಲೋಚನಸಭೆಯಲ್ಲಿ ಚರ್ಚಿಸಿ ನಿರ್ಣಯಿಸ ಲಾಗುತ್ತಿತ್ತು. ಹೊಯ್ಸಳರ ಮಂತ್ರಿ ಪರಿಷತ್ತಿಗೆ ಪಂಚ ಪ್ರಧಾನ ಸಮಿತಿ ಎಂಬ ಹೆಸರಿದ್ದಿತು. ಅಮಾತ್ಯ, ಮಹಾಸಂಧಿವಿಗ್ರಹಿ, ಶ್ರೀಕರಣಾಧಿಕಾರಿ, ಮುಖ್ಯ ದಂಡನಾಯಕ ಮತ್ತು ಹಿರಿಯರ ಭಾಂಡಾರಿ ಹುದ್ದೆಯಲ್ಲಿದ್ದ ಸಚಿವರು ಪಂಚ ಪ್ರಧಾನ ಸಮಿತಿಯ ಸದಸ್ಯರಾಗಿರುತ್ತಿದ್ದರು. ಕಾಲಕ್ರಮೇಣ ರಾಜ್ಯ ಸಾಮ್ರಾಜ್ಯವಾಗಿ ಮಾರ್ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಸಚಿವರನ್ನೂ ದಂಡನಾಯಕರನ್ನೂ ನೇಮಿಸಿಕೊಳ್ಳಲಾಯಿತು. ದಕ್ಷತೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ಇತರ ಸದ್ಗುಣಗಳು ಸಚಿವ ಪದವಿಯ ಮುಖ್ಯ ಅರ್ಹತೆಗಳಾಗಿದ್ದುವು. ಹೊಯ್ಸಳ ಅರಸರ ಕಾಲದಲ್ಲಿ ಸಚಿವ ಮತ್ತು ದಂಡನಾಯಕರಾಗಿದ್ದ ಅನೇಕ ವ್ಯಕ್ತಿಗಳು ವಿದ್ಯೆ, ವಿನಯ ಸಂಪನ್ನರೂ ದೂರದೃಷ್ಟಿಯುಳ್ಳವರೂ ದಕ್ಷಯೋಧರೂ ಆಡಳಿತಗಾರರೂ ಆಗಿದ್ದರು. ಇವರಲ್ಲದೆ, ಅನೇಕ ಆಡಳಿತಾಂಗಗಳಿಗಾಗಿ ಹೆಗ್ಗಡೆ, ಮಹಾಪಸಾಯತ, ಸಂಧಿವಿಗ್ರಹಿ, ಸೇನಬೋವ, ಸೈನ್ಯ ವಿಭಾಗಗಳಿಗೆ ದಂಡನಾಯಕ, ಸೇನಾಪತಿ, ಸಾಹಣೆ, ಮಾವಂತರೂ ರಾಜನ ಸ್ವಂತ ಕಾವಲಿಗೆ ಗರುಡರೂ ಇರುತ್ತಿದ್ದರು.

	ಅರಮನೆ ಅಧಿಕಾರಿಗಳು, ಸೈನ್ಯ, ಜನೋಪಕಾರಿ ಕೆಲಸಗಳು ಮುಂತಾದ ರಾಜ್ಯದ ವೆಚ್ಚಕ್ಕಾಗಿ ಭೂಕಂದಾಯ, ರಾಜನ ಸ್ವಂತ ಭೂ ಆಸ್ತಿಯಿಂದ ಬರುವ ಉತ್ಪನ್ನ, ನಿಧಿನಿಕ್ಷೇಪಗಳು, ಚಿನ್ನ, ಕಬ್ಬಿಣದ ಗಣಿಗಳು, ಹಲವು ರೀತಿಯ ಸುಂಕಗಳು, ಕಪ್ಪಕಾಣಿಕೆಗಳು, ಜುಲ್ಮಾನೆಗಳು ಇವು ಮುಖ್ಯ ಆದಾಯ ಮೂಲಗಳಾಗಿದ್ದುವು.

	ರಾಜ್ಯವನ್ನು ನಾಡುಗಳಾಗಿ ವಿಂಗಡಿಸಲಾಗಿತ್ತು. ಮೈಸೆನಾಡು, ಕಬ್ಬಾಹುನಾಡು, ತಳಿಗೆನಾಡು ಮುಂತಾದ ನಾಡುಗಳ ಹೆಸರುಗಳನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಸಚಿವ ಮತ್ತು ದಂಡನಾಯಕರನ್ನೂ ರಾಜಕುಮಾರರನ್ನೂ ರಾಣಿಯರನ್ನೂ ನಾಡುಗಳ ಅಥವಾ ನಾಡುಕೂಟಗಳ ಮೇಲ್ವಿಚಾರಣೆಗೆ ನೇಮಿಸಲಾಗುತ್ತಿತ್ತು. ನಾಡ ಗೌಡ ಮತ್ತು ನಾಡ ಹೆಗ್ಗಡೆ ಎಂಬ ಅಧಿಕಾರಿಗಳು ಈ ನಾಡುಗಳ ಉಪವಿಭಾಗಗಳಲ್ಲಿ ರುತ್ತಿದ್ದರು.

	ಪ್ರಧಾನಿ, ಹೆಗ್ಗಡೆ, ಸೇನಾಪತಿ, ದಂಡನಾಯಕ ಮುಂತಾದವರನ್ನು ಒಳಗೊಂಡಿದ್ದು ವ್ಯವಸ್ಥೆ ಮತ್ತು ಆಚರಣೆಯಲ್ಲಿ ರಾಜನ ಚಿಕ್ಕ ಪ್ರತಿಬಿಂಬದಂತೆ ಇರುತ್ತಿದ್ದರು. ರಾಜ ಸರ್ವೋಚ್ಚನಾಗಿದ್ದರೆ ಇವರು ಅವನ ಅಧೀನರೆಂಬುದಷ್ಟೇ ವ್ಯತ್ಯಾಸ. ಇವರಿಗೂ ಸ್ವಂತ ಭೂ ಆಸ್ತಿಗಳಲ್ಲದೆ, ಹಲವು ವಿಶಿಷ್ಟ ಕಂದಾಯ ಸುಂಕಗಳು ಆದಾಯ ಮೂಲಗಳಾಗಿದ್ದುವು. ದೊಡ್ಡ ದೊಡ್ಡ ಪಟ್ಟಣಗಳ ಆಡಳಿತಕ್ಕಾಗಿ ಪುರಸಭೆಗಳಿದ್ದುವು. ದೋರಸಮುದ್ರ, ಅರಸೀಕೆರೆ, ಶ್ರವಣಬೆಳಗೊಳ, ಬಳ್ಳಿಗಾಮೆ ಮೊದಲಾದ ಪಟ್ಟಣ ಸಭೆಗಳ ಹಾಗೂ ಆಡಳಿತ ಮುಖ್ಯರ ಹೆಸರುಗಳು ಶಾಸನಗಳಲ್ಲಿ ದೊರೆಯುತ್ತವೆ. ಉದಾಹರಣೆಗೆ ವಿಷ್ಣುವರ್ಧ ನನ ಕಾಲದಲ್ಲಿ ಹೊಯ್ಸಳ ಸೆಟ್ಟಿ ಎಂಬವನು ದೋರಸಮುದ್ರದ ಆಡಳಿತ ಸಭೆಯ ಮುಖ್ಯನಾಗಿದ್ದ. ವೀರಬಲ್ಲಾಳನ ಕಾಲದಲ್ಲಿ ಮೇಚಿಸೆಟ್ಟಿ ಎಂಬವನು ಬಳ್ಳಿಗಾಮೆಯ ಪಟ್ಟಣ ಸಭೆಯ ಅಧ್ಯಕ್ಷನಾಗಿದ್ದ. ಗ್ರಾಮಗಳಲ್ಲಿ ಗವುಂಡ (ಗೌಡ) ಅಥವಾ ಹೆಗ್ಗಡೆ ಮುಖ್ಯಾಧಿಕಾರಿಯಾ ಗಿರುತ್ತಿದ್ದ. ಅವನ ಸಹಾಯಕ್ಕೆ ಲೆಕ್ಕಪತ್ರಗಳನ್ನಿಡಲು ಕರಣಿಕನಿರುತ್ತಿದ್ದ. ತಳವಾರ ಹುದ್ದೆಯೂ ಆಗಿನ ಕಾಲದಲ್ಲಿದ್ದುದಾಗಿ ಬಳ್ಳಿಗಾಮೆಯ ಶಾಸನವೊಂದರಿಂದ ತಿಳಿದುಬರುತ್ತದೆ. ಗ್ರಾಮಗಳ ಅಭ್ಯುದಯಕ್ಕಾಗಿ ಗ್ರಾಮಸಭೆ ಅಥವಾ ಪಂಚಾಯಿತಿ ಸಭೆ ಇದ್ದಿತು. ದೇವಾಲಯಗಳು, ಗೋಮಾಳ, ಸಾರ್ವಜನಿಕ ರಸ್ತೆಗಳು, ಕೆರೆಗಳು ಮುಂತಾದವುಗಳ ಮೇಲ್ವಿಚಾರಣೆಯನ್ನು ಗ್ರಾಮಸಭೆಗಳು ನೋಡಿಕೊಳ್ಳುತ್ತಿದ್ದುವು. ಅಗ್ರಹಾರ ಗಳ ಆಡಳಿತಕ್ಕೆ ಮಹಾಜನ ಸಭೆ ಇರುತ್ತಿತ್ತು. ಅನೇಕ ವೃತ್ತಿಗಳ ಮೇಲಿನ ಸುಂಕಗಳು, ಗ್ರಾಮದಲ್ಲಿ ನಡೆಯುವ ವ್ಯಾಪಾರದ ಮೇಲೆ ಸುಂಕ, ಜಾನುವಾರುಗಳು ಮತ್ತು ಇತರ ಬಾಬುಗಳ ಮೇಲಿನ ಸುಂಕಗಳಿಂದ ಗ್ರಾಮ-ನಗರಾಡಳಿತಗಳು ನಡೆಯುತ್ತಿದ್ದುವು. 	
												(ಜಿ.ಆರ್.ಆರ್.)

	ಆರ್ಥಿಕ-ಸಾಮಾಜಿಕ ಸ್ಥಿತಿ : ಈ ಕಾಲದಲ್ಲಿ ರಾಜ್ಯ ಸುಭಿಕ್ಷವಾಗಿತ್ತು. ರಾಜ್ಯದ ಆದಾಯದ ಹೆಚ್ಚಿನ ಪಾಲು ಕೃಷಿ, ವ್ಯಾಪಾರ ಕ್ಷೇತ್ರಗಳಿಂದ ಸಲ್ಲುತ್ತಿತ್ತು. ಪ್ರಜೆಗಳು ತೆರಬೇಕಾಗಿದ್ದ ತೆರಿಗೆಗಳು ಹಲವಿದ್ದುವು. ಭೂಕಂದಾಯ, ವ್ಯಾಪಾರ ಸಂಬಂಧದ ತೆರಿಗೆಗಳ ಜೊತೆಗೆ ವೃತ್ತಿತೆರಿಗೆ, ಜಾತಿತೆರಿಗೆ, ಸಾಮಾಜಿಕ ಸಮಾರಂಭಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಮುಂತಾದವೂ ಇದ್ದುವು. ಗದ್ಯಾಣ, ಹಣ, ಹಾಗ, ಅಡ್ಡ, ಬೇಳೆ ಮುಂತಾದ ವಿವಿಧ ಮೌಲ್ಯದ ನಾಣ್ಯಗಳು ಚಲಾವಣೆಯಲ್ಲಿ ಇದ್ದುವು. ಖಂಡುಗ, ಸಲಗೆ, ಕೊಳಗ, ಕಂಬ, ಬಳ್ಳ, ಮಾನ ಮುಂತಾದವು ಅಳತೆಯ ಮಾನಗಳು. ನಿಯತವಾಗಿ ಭೂಮಾಪನೆ ನಡೆಯುತ್ತಿತ್ತು. ಭೂ ವಿವಾದ ಉಂಟಾದಾಗ ಹೊಸದಾಗಿ ಭೂಮಾಪನೆ ನಡೆಯುತ್ತಿತ್ತು.

	ರಾಜ್ಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲಸಿತ್ತು. ಸರ್ವಧರ್ಮಗಳಿಗೂ ಸಮಾನ ಪೋಷಣೆ ಪ್ರೋತ್ಸಾಹ ದೊರೆಯಿತು. ವಿಭಿನ್ನ ಧರ್ಮಗಳಿಗೆ ಸೇರಿದವರು ವಿವಾಹವಾಗಿ ಸಹಬಾಳ್ವೆ ನಡೆಸಿದ ದೃಷ್ಟಾಂತ ಈ ಕಾಲದಲ್ಲಿ ಕಾಣಸಿಗುತ್ತದೆ. ಚಂದ್ರಮೌಳಿ ಎಂಬ ಅಧಿಕಾರಿ ಶೈವ, ಆದರೆ ಇವನ ಪತ್ನಿ ಅಚ್ಚಿಯಕ್ಕ ಜೈನಧರ್ಮಾವಲಂಬಿ. ಬ್ರಾಹ್ಮಣರಿಗೆ, ಜೈನಗುರುಗಳಿಗೆ, ಶ್ರೀವೈಷ್ಣವ ಆಚಾರ್ಯರಿಗೆ ಪೂಜ್ಯಸ್ಥಾನವಿತ್ತು. ತಮಿಳು ವಿದ್ವಾಂಸರು ಹೊಯ್ಸಳನಾಡಿಗೆ ಬಂದು ವೈಷ್ಣವ ಧರ್ಮಪ್ರಸಾರದಲ್ಲಿ ನಿರತರಾದರು. ಆಗಾಗ ಧಾರ್ಮಿಕ ವಿಷಯಗಳಲ್ಲಿ ಚರ್ಚಾಸಭೆಗಳು ನಡೆಯುತ್ತಿದ್ದುವು. ಅರಸರ ಬಿರುದುಗಳಲ್ಲಿ ಚತುಸ್ಸಮಯಸಮುದ್ಧರಣ ಎಂಬುದೂ ಒಂದು.

	ದಾನಧರ್ಮ ಕಾರ್ಯಗಳು ನಡೆಯುತ್ತಿದ್ದವು. ದೇವಾಲಯ, ಬಸದಿ, ಕೆರೆಕಟ್ಟೆಗಳನ್ನು ಕಟ್ಟಿಸುವುದು ಹಾಗೂ ಜೀರ್ಣೋದ್ಧಾರ ಮಾಡಿಸುವುದು, ದೇವತಾಪೂಜೆ ನೈವೇದ್ಯಾದಿ ಸೇವೆಗಳಿಗೆ ಭೂದಾನ, ಧನದಾನ ನೀಡುವುದು ಪುಣ್ಯಕಾರ್ಯಗಳೆನಿಸಿದ್ದುವು. ಕಾಡನ್ನು ಕಡಿದು ಊರು, ಕೆರೆಗಳನ್ನು ನಿರ್ಮಿಸಿದ ನಿದರ್ಶನಗಳುಂಟು. ವೇದಾಧ್ಯಯನ, ಲಲಿತಕಲೆಗ ಳಿಗೆ ಪ್ರೋತ್ಸಾಹ ದೊರೆಯಿತು. ರಾಜನೂ ಅಧಿಕಾರಿಗಳೂ ವ್ಯಾಪಾರಿಗಳೂ ಖಾಸಗಿ ವ್ಯಕ್ತಿಗಳೂ ಧರ್ಮಕಾರ್ಯನಿರತರಾಗಿದ್ದನ್ನು ಈ ಕಾಲದಲ್ಲಿ ಕಾಣುತ್ತೇವೆ.

	ಅಧಿಕಾರಿಗಳೂ ಪ್ರಜೆಗಳೂ ಅರಸನಿಗೆ ನಿಷ್ಠರಾಗಿದ್ದರು. ಅರಸನಿಗಾಗಿ ರಾಜ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿಗೊಡಲು ಸಾಮಾನ್ಯ ಪ್ರಜೆಯೂ ಹಿಂಜರಿಯುತ್ತಿರಲಿಲ್ಲ. ಆತ್ಮಬಲಿಯ ಹಲವು ಪ್ರಕಾರಗಳು ಈ ಕಾಲದಲ್ಲಿ ಪ್ರಚಲಿತವಿದ್ದವು. ಗರುಡ ಪದ್ಧತಿ ವಿಶೇಷ ಗಮನಾರ್ಹ. ಯುದ್ಧದಲ್ಲಿ ಮೃತರಾದವರ, ಗರುಡರಾಗಿದ್ದವರ ಕುಟುಂಬಗಳಿಗೆ ದಾನ ನೀಡಲಾಗು ತ್ತಿತ್ತು. ಸತಿಪದ್ಧತಿ ಜಾರಿಯಲ್ಲಿತ್ತು. ರಾಜ್ಯದ ಅನೇಕ ಭಾಗಗಳಲ್ಲಿ ಗೋಗ್ರಹಣ ಪದೇ ಪದೇ ನಡೆಯುತ್ತಿದ್ದುವು. ತುರುಗಳ್ಳರು ಅಕ್ಕಪಕ್ಕದ ಊರಿನವರಾಗಿರಬಹುದು, ಇಲ್ಲವೆ ಇತರರಾಗಿರಬಹುದು. ಊರ ರಕ್ಷಣೆಗೆ ಗೋರಕ್ಷಣೆಗೆ ನಿಂತು ಹೋರಾಡಿ ಮರಣಹೊಂದಿದ ವೀರನ ಕುಟುಂಬಗಳಿಗೆ ಭೂಮಿಯನ್ನು, ಹಣವನ್ನು ದಾನ ನೀಡಿದ್ದನ್ನು ಕಾಣುತ್ತೇವೆ. ಆಗಾಗ ಗಡಿವಿವಾದಗಳ ಸಂಬಂಧದಲ್ಲಿ ಹೋರಾಟಗಳು ನಡೆಯುತ್ತಿದ್ದುವು.

	ವ್ಯಾಪಾರ ಚಟುವಟಿಕೆ ಚುರುಕಾಗಿತ್ತು. ವರ್ತಕರು ಅನೇಕ ದಾನಧರ್ಮ ಕಾರ್ಯಗಳನ್ನು ನಡೆಸಿಕೊಡುತ್ತಿದ್ದರು. ಸಂತೆಗಳು ನಡೆಯುತ್ತಿದ್ದುವು. ಬಟ್ಟೆ, ಶ್ರೀಗಂಧ, ಅಡಕೆ, ಮಾವು, ಮಸಾಲೆ ಮತ್ತು ವನ್ಯಪದಾರ್ಥಗಳನ್ನು ರಫ್ತು ಮಾಡಲಾಗುತ್ತಿತ್ತು. ಕುದುರೆ, ಆನೆ, ಮುತ್ತು, ಹತ್ತಿ, ಉಪ್ಪು, ಬಂಗಾರ ಮತ್ತು ಬೆಳ್ಳಿ ಮುಂತಾದವುಗಳನ್ನು ಆಮದು ಮಾಡಿಕೊಳ್ಳ ಲಾಗುತ್ತಿತ್ತು. ಸಾಮಗ್ರಿ ಸಾಗಣೆಗೆ ಪ್ರಾಣಿಗಳನ್ನು ಮುಖ್ಯವಾಗಿ ಬಳಸಲಾಯಿತು. ಅಯ್ಯಾವೊಳೆ ಐನೂರ್ವರು ಒಂದು ಪ್ರಮುಖ ವಾಣಿಜ್ಯ ಸಂಘವಾಗಿದ್ದಿತು.

	ಸ್ತ್ರೀಯರಿಗೆ ಲಲಿತಕಲೆ ಮುಂತಾದ ಕೆಲವು ರಂಗಗಳಲ್ಲಿ ವಿಶೇಷ ಪ್ರೋತ್ಸಾಹಗಳಿದ್ದುವು. ವಿಷ್ಣುವರ್ಧನನ ಪತ್ನಿ ಶಾಂತಲೆ ಸಂಗೀತನಾಟ್ಯ ಸರಸ್ವತಿ ಎಂದು ಖ್ಯಾತಳಾಗಿದ್ದಳು. ಕೆಲವು ಸ್ತ್ರೀ ಅಧಿಕಾರಿಗಳೂ ಇದ್ದರು. ದಾನ ನೀಡುವಲ್ಲಿ ಯಜಮಾನನಿಗೆ ಪತ್ನೀಪುತ್ರರ ಅನುಮತಿ ಅಗತ್ಯವಿತ್ತೆಂದು ತೋರುತ್ತದೆ. ಸ್ತ್ರೀಯರ ವೇಷಭೂಷಣಗಳು ಸರಳವಾಗಿದ್ದುವು. ಅಂಗರಾಗಕ್ಕೆ ಸ್ತ್ರೀಯರು ವಿಶೇಷ ಮಹತ್ತ್ವ ಕೊಡುತ್ತಿದ್ದರು. ದೇವದಾಸಿ ಪದ್ಧತಿ ಅಸ್ತಿತ್ವದಲ್ಲಿತ್ತು.

	ಸೋಮನಾಥಪುರ, ಬೆಳ್ಳೂರು, ಸರ್ವಜ್ಞಪುರ, ಕೆಲ್ಲಂಗೆರೆ ಮುಂತಾದವು ಈ ಕಾಲದ ಕೆಲವು ವಿದ್ಯಾಕೇಂದ್ರಗಳು. ದೇವಾಲಯಗಳು ಚಿಕ್ಕ ಸಾಮಾಜಿಕ ಕೇಂದ್ರಗಳಾಗಿ ಜನರಿಗೆ ಮಾರ್ಗದರ್ಶಕವಾಗಿದ್ದುವು. ಅಗ್ರಹಾರಗಳು ವೇದಪಾರಂಗತ ಬ್ರಾಹ್ಮಣರ ವಾಸಸ್ಥಾನಗಳಾಗಿದ್ದುವು. ಚೋಳರ ಹಾಗೆ ಹೊಯ್ಸಳರು ಕೆಲವು ಅಗ್ರಹಾರಗಳನ್ನು ಚರ್ತುರ್ವೇದಿಮಂಗಲಗಳೆಂದು ಕರೆದರು. ಉದಾಹರಣೆಗೆ ಮದ್ದೂರು ನಾರಸಿಂಹಚತುರ್ವೇದಿಮಂಗಲವಾಗಿದ್ದಿತು; ನಾಗಮಂಗಲ ವೀರಬಲ್ಲಾಳ ಭಟ್ಟರತ್ನಾಕರವೆನಿಸಿತ್ತು.	
										(ಎಚ್.ಎಮ್.ಎನ್.ಆರ್.)

	ವಾಸ್ತು-ಶಿಲ್ಪ : ಮಧ್ಯಕಾಲೀನ ಭಾರತೀಯ ವಾಸ್ತು-ಶಿಲ್ಪ ಕ್ಷೇತ್ರದಲ್ಲಿ 11 ರಿಂದ 13ನೆಯ ಶತಮಾನದ ಕೊನೆಯ ವರೆಗೆ ಅಸ್ತಿತ್ವದಲ್ಲಿದ್ದ ಹೊಯ್ಸಳ ಶೈಲಿ ನೋಡುಗರ ಮನಸ್ಸನ್ನು ಸೆರೆಹಿಡಿದಿಡುವ, ಮರೆಯಲಾಗದಂಥ ದೃಶ್ಯಗಳನ್ನು ನಿರ್ಮಿಸುವ ತನ್ನ ಗುಣಗಳಿಂದ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಆ ಕಾಲಕ್ಕೂ ಮೊದಲಿನ ಭುವನೇಶ್ವರದ ರಾಜರಾಣಿ ಮಂದಿರದ ಅದ್ಭುತ ರಮ್ಯತೆ, ಖಜುರಾಹೊದಲ್ಲಿರುವ ಕಂದಾರಿಯ ಮಹಾದೇವ ಮಂದಿರದಲ್ಲಿ ಕಾಣುವ ಅಂತಸ್ಸತ್ತ್ವ, ಎಲ್ಲೋರದ ಕೈಲಾಸ ದೇವಾಲಯದ ಭವ್ಯತೆ-ಇವೆಲ್ಲ ಗುಣಗಳನ್ನು ಸಮನ್ವಯಗೊಳಿಸಿಕೊಂಡಿರುವುದರೊಂದಿಗೆ ವಾಸ್ತು ಮತ್ತು ಮೂರ್ತಿಶಿಲ್ಪ ವಿಧಾನಗಳ ಸುಗಮ ಸಮ್ಮಿಳನ ಇಲ್ಲಿದೆ.

ಹೊಯ್ಸಳ ಕಟ್ಟಡಗಳನ್ನು ಔತ್ತರೇಯ-ದಾಕ್ಷಿಣಾತ್ಯ ಶೈಲಿಗಳ ಮಧ್ಯವರ್ತಿ ಎಂದು ಹೇಳಲಾಗಿದ್ದರೂ ಔತ್ತರೇಯ ಶೈಲಿಯ ಲಕ್ಷಣಗಳು ವಿರಳವಾಗಿವೆ. ಅದರ ವಾಸ್ತು ಅಲಂಕರಣ ವಿಧಾನದಲ್ಲೂ ಶಿಖರದ ಕೆಲವಂಶಗಳಲ್ಲೂ ಕೆಲವು ಔತ್ತರೇಯ ಲಕ್ಷಣಗಳು ಕಂಡುಬರುತ್ತವೆ. ಆದರೆ ಹೊಯ್ಸಳ ರಾಜ್ಯದ ಪರಿಸರದಲ್ಲಿ ರೂಢಿಯಲ್ಲಿದ್ದ ದಾಕ್ಷಿಣಾತ್ಯ ಶೈಲಿಯ ಪ್ರಭಾವ ಹೆಚ್ಚು ಸ್ಪಷ್ಟವಾಗಿದೆ. ಹೊಯ್ಸಳ ರೂವಾರಿಗಳು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಔತ್ತರೇಯ-ದಾಕ್ಷಿಣಾತ್ಯ ವಾಸ್ತುಶೈಲಿಗಳ ಪ್ರಮುಖ ಲಕ್ಷಣಗಳನ್ನು ತಮ್ಮ ಕಾಲದ ನಿರ್ಮಾಣಗಳಲ್ಲಿ ಅಳವಡಿಸಿಕೊಂಡರೂ ಅವಕ್ಕೆ ತಮ್ಮ ಪ್ರತಿಭಾಶಕ್ತಿಯ ದ್ಯೋತಕವಾಗಿ ಹೊಸ ರೂಪವನ್ನು ಕೊಟ್ಟು ಶೈಲಿಯ ಸೊಬಗನ್ನು ದ್ವಿಗುಣಗೊಳಿಸಿದ್ದಾರೆ. ಹೊಯ್ಸಳ ಶೈಲಿ ಇತರ ಶೈಲಿಗಳ ಪ್ರಧಾನ ಲಕ್ಷಣಗಳ ಹೊರರೂಪದ ಒಗ್ಗೂಡಿಕೆಗೆ ಸೀಮಿತವಾಗಿ ನಿಲ್ಲದೆ ಅವುಗಳ ಸಮಗ್ರ ಸಂಯೋಜನೆಯನ್ನು ಸಾಧಿಸುವುದರೊಂದಿಗೆ ಕೆಲವು ಹೊಸ ವಿಶಿಷ್ಟ ಅಂಶಗಳನ್ನೂ ಸೃಷ್ಟಿಸಿತು.

ಹೊಯ್ಸಳ ಶೈಲಿಯ ಉಗಮಕ್ಕೆ ದಕ್ಷಿಣ ಭಾರತದ ಚೋಳ-ಪಾಂಡ್ಯ ವಾಸ್ತುಶೈಲಿಯೂ ದಖನ್ನಿನ ಕಲ್ಯಾಣ ಚಾಳುಕ್ಯ ಶೈಲಿಯೂ ಮೈಸೂರು ಪ್ರದೇಶದಲ್ಲೇ ಬಳಕೆಯಲ್ಲಿದ್ದ ಗಂಗ, ನೊಳಂಬ ಕಟ್ಟಡಗಳೂ ಸ್ಫೂರ್ತಿಯನ್ನೊದಗಿಸಿದುವು. ಹೊಯ್ಸಳ ವಾಸ್ತುಶಿಲ್ಪಿಗಳು ಇವುಗಳಲ್ಲಿ ಯಾವೊಂದು ಪದ್ಧತಿಯ ಅನುಕರಣೆ ಮಾಡುವುದರಿಂದಲೂ ತೃಪ್ತರಾಗಲಿಲ್ಲ; ಅವೆಲ್ಲವುಗಳ ಅಂಶಗಳನ್ನು ಅಳವಡಿಸಿಕೊಂಡರೂ ಅಪೂರ್ವ ಪ್ರಯೋಗಪರರಾಗಿ ಹೊಸ ಪದ್ಧತಿಯೊಂದರ ಸೃಷ್ಟಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟರು. ಅವರ ವಿಶಿಷ್ಟ ಗುಣಗಳೆಂದರೆ ಸರಳತೆಯನ್ನು ತಿರಸ್ಕರಿಸಿದುದು, ಅನುಕರಣೆಯ ಮಾರ್ಗವನ್ನು ತ್ಯಜಿಸಿದುದು; ಮತ್ತು ಅಲಂಕರಣಶೀಲ ಸೂಕ್ಷ್ಮಕೆತ್ತನೆಗಳನ್ನು ಸೃಷ್ಟಿಸುವ ಮೂಲಕ ಇತರ ಶೈಲಿಗಳಲ್ಲಿ ರೂಢಿಯಲ್ಲಿದ್ದ ಸುಂದರ ವಾಸ್ತುರೂಪಗಳನ್ನು ಭವ್ಯಕಲಾಭಾಂಡಾರಗಳಾಗಿ ಪರಿವರ್ತಿಸಿದುದು.

	ಇಲ್ಲಿ ಪ್ರಸ್ತಾಪಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಅನೇಕ ಕಲಾ ಇತಿಹಾಸಕಾರರು ಉತ್ತರಕಾಲೀನ ಚಾಳುಕ್ಯ ಮತ್ತು ಹೊಯ್ಸಳ ಶೈಲಿಗಳನ್ನು ಅವಿಭಾಜ್ಯವೆಂದು ಪರಿಗಣಿಸಿರುವುದು. ಫಗ್ರ್ಯೂಸನ್, ವಿನ್ಸೆಂಟ್ ಸ್ಮಿತ್ ಅಂಥವರಲ್ಲಿ ಪ್ರಮುಖರು. ಪರ್ಸಿ ಬ್ರೌನ್ ಸಹ ಈ ದೃಷ್ಟಿಯಿಂದ ಹೊರತಾದವರಲ್ಲ. ಚಾಳುಕ್ಯ ಶೈಲಿ ಅವರ ಸಾಮಂತರಾಗಿದ್ದ ಹೊಯ್ಸಳ ದೊರೆಗಳ ಆಶ್ರಯದಲ್ಲಿ ಪರಿಪಕ್ವತೆಯನ್ನು ಸಾಧಿಸಿತೆಂದು ಅವರು ಹೇಳಿದ್ದಾರೆ. ಮುಂದುವರಿದು, ಈ ಶೈಲಿ ಬಿಜಾಪುರ ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಉಗಮವಾಯಿತೆಂದೂ ಸುದೀರ್ಘವಿಕಾಸದ ಕೊನೆಯ ನಿದರ್ಶನಗಳನ್ನು ಹೊಯ್ಸಳ ರಾಜ್ಯದಲ್ಲಿ 12-13ನೆಯ ಶತಮಾನಗಳಲ್ಲಿ ಕಾಣಬಹುದೆಂದೂ ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯ ಒಂದು ಸೀಮಿತಘಟ್ಟದವರೆಗೆ ನಿಜವಾದರೂ ಹೊಯ್ಸಳ ಶೈಲಿಯಲ್ಲಿ ಕೆಲವಾರು ಮೂಲಭೂತ ಹೊಸ ಅಂಶಗಳು ಬಳಕೆಗೆ ಬಂದು ಅದನ್ನು ಒಂದು ಪ್ರತ್ಯೇಕ ಶೈಲಿಯೆಂದು ಪರಿಗಣಿಸಲು ಸಾಧನಗಳಾಗಿವೆ.

ಮೊದಲಿಗೆ ಚಾಳುಕ್ಯ ಸಾಮಂತರಾಗಿದ್ದ ಹೊಯ್ಸಳರು 12ನೆಯ ಶತಮಾನದ ಪೂರ್ವಾರ್ಧದಲ್ಲಿ ಸ್ವತಂತ್ರರಾದ ಅನಂತರ ಚಾಳುಕ್ಯ ಸಾಮ್ರಾಜ್ಯ ಸಾಂಸ್ಕøತಿಕ ಸಂಸ್ಥೆಗಳಿಗೆ ಉತ್ತರಾಧಿಕಾರಿಗಳಾಗಿ ಆ ಸಂಸ್ಕøತಿ ಪರಂಪರೆಯನ್ನು ಸ್ವೀಕರಿಸಿದರು. ಅದರ ಫಲವಾಗಿ ಚಾಳುಕ್ಯ-ಹೊಯ್ಸಳ ವಾಸ್ತುಶೈಲಿಗಳಲ್ಲಿ ಹಲವಾರು ಸಾಮ್ಯಗಳು ಎದ್ದುಕಾಣುತ್ತವೆ. ಎರಡು ಶೈಲಿಯ ದೇವಾಲಯಗಳ ಬಾಗಿಲುವಾಡಗಳನ್ನು ಸುಂದರ ಕೆತ್ತನೆಗಳಿಂದ ಅಲಂಕರಿಸಲಾಗಿರುತ್ತದೆ. ಹೂಬಳ್ಳಿಗಳು, ಲತಾಗುಲ್ಮಗಳು, ಅವುಗಳ ಮಧ್ಯೆ ಸೂಕ್ಷ್ಮಪ್ರಾಣಿಪಕ್ಷಿಗಳು, ವಿರಳವಾಗಿ ದೇವಗಣ-ಮಾನವಗಣದ ಕೆತ್ತನೆಗಳು-ಇವುಗಳಿಂದಲೂ ಜ್ಯಾಮಿತೀಯ ವಿನ್ಯಾಸಗಳಿಂದಲೂ ಈ ಅಲಂಕರಣಗಳನ್ನು ಮಾಡಲಾಗಿರುತ್ತದೆ. ಎರಡು ಶೈಲಿಯ ದೇವಾಲಯಗ ಳಲ್ಲೂ ಕಡೆತ ಯಂತ್ರದ (ಲೇತ್) ಮೇಲೆ ತಯಾರಿಸಿದ ವೈವಿಧ್ಯಪೂರ್ಣ ಕಂಬಗಳನ್ನು ಬಳಸಲಾಗಿದೆ. ದೇವಾಲಯದ ಒಳಭಾಗಕ್ಕೆ ಸಾಕಷ್ಟು ಗಾಳಿ ಬೆಳಕುಗಳನ್ನು ಪೂರೈಸುವ ಸಲುವಾಗಿ ಮುಖಮಂಟಪದ ಗೋಡೆಗಳ ಮೇಲ್ಭಾಗದಲ್ಲಿ ಉಪಯೋಗಿಸಿರುವ ಕಲ್ಲಿನ ಜಾಲಂಧ್ರಗಳನ್ನು ಇವೆರಡು ಶೈಲಿಗಳ ಕಟ್ಟಡಗಳಲ್ಲೂ ಕಾಣಬಹುದು. ಆದರೆ ಈ ಸಾಮ್ಯಗಳೊಂದಿಗೆ ಹಲವಾರು ವೈಶಿಷ್ಟ್ಯಪೂರ್ಣ ಆವಿಷ್ಕರಣಗಳನ್ನು ಹೊಯ್ಸಳ ಕಟ್ಟಡಗಳಲ್ಲಿ ಕಾಣಬಹುದಾಗಿದೆ ಮತ್ತು ಆ ಶೈಲಿಗೆ ಅವು ಪ್ರತ್ಯೇಕ ಅಸ್ತಿತ್ವವನ್ನು ನೀಡುತ್ತವೆ. ಈ ದೇವಾಲಯಗಳ ವಿವಿಧ ವಾಸ್ತು ಲಕ್ಷಣಗಳ ವಿಶ್ಲೇಷಣಾತ್ಮಕ ಅಧ್ಯಯನದಿಂದ ಈ ಪ್ರಾದೇಶಿಕ ಶೈಲಿಯ ನಿರೂಪಣೆಯಲ್ಲಿ ಕಂಡುಬರುವ ಅಮಿತ ಉತ್ಸಾಹ ಮತ್ತು ನೆರೆಹೊರೆಯ ವಾಸ್ತುಶೈಲಿಯ ಅಂಶಗಳ ಸಮ್ಮಿಲನ, ಅದರ ಫಲವಾಗಿ ಹೊಯ್ಸಳ ಶೈಲಿಯಲ್ಲಿ ಕಂಡುಬರುವ ಆವಿಷ್ಕಾರಗಳನ್ನು ಗುರುತಿಸ ಬಹುದಾಗಿದೆ. ಈ ನವಶೈಲಿಯಲ್ಲಿ ಪರಿಸರದ ಪ್ರಭಾವ ಪ್ರತಿಬಿಂಬಿಸುತ್ತಿ ದ್ದರೂ ಹೊಯ್ಸಳ ಶಿಲ್ಪಿಗಳ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಹೊಸ ಶೈಲಿಯ ನಿರ್ಮಾಣದತ್ತ ಕಾಣುವ ಮೊದಲ ದಿಟ್ಟ ಹೆಜ್ಜೆ ಕಟ್ಟಡ ನಿರ್ಮಾಣಕ್ಕೆ ಅವರು ಬಳಸಿದ ಕಲ್ಲು. ದಕ್ಷಿಣ ಭಾರತದಲ್ಲೂ ಮೈಸೂರು ಪ್ರಾಂತದಲ್ಲೂ ಆವರೆಗೂ ಕಣಶಿಲೆಯನ್ನು (ಗ್ರಾನೈಟ್) ಕಟ್ಟಡಗಳಿಗೆ ಬಳಸಲಾಗುತ್ತಿತ್ತು. ಕಣಶಿಲೆ ಬಹಳ ಪೆಡಸಾಗಿರುವುದರಿಂದ ಅದರ ದೊಡ್ಡ ಪ್ರಮಾಣದ ದಿಮ್ಮಿಗಳನ್ನು ಬಳಸಿ ಬೃಹತ್ಪ್ರಮಾಣದ ಕಟ್ಟಡಗಳನ್ನು ಕಟ್ಟಬಹುದಾಗಿತ್ತು. ಈ ರೀತಿಯ ದೇವಾಲಯಗಳು ಚೋಳ-ಪಾಂಡ್ಯ ಶೈಲಿಗಳಲ್ಲಿ ಕಾಣಬರುತ್ತವೆ. ಪಲ್ಲವ-ಚೋಳ-ಪಾಂಡ್ಯ ದೇವಾಲಯಗಳ ಶಿಲ್ಪಗಳು ಒಟ್ಟಾರೆ ಮೋಹಕವಾಗಿದ್ದರೂ ಕಣಶಿಲೆಯ ಪೆಡಸುತನದಿಂದ ಸೂಕ್ಷ್ಮವಾದ ಕುಸುರಿಕೆತ್ತನೆಗಳನ್ನು ಕಾಣಲಾಗುವುದಿಲ್ಲ. ಕೆಲವು ಪ್ರಾದೇಶಿಕ ವ್ಯತ್ಯಾಸಗಳನ್ನು ಬಿಟ್ಟರೆ ಗಂಗ-ನೊಳಂಬ ಕಟ್ಟಡಗಳು ಕಣಶಿಲೆಯಲ್ಲಿ ನಿರ್ಮಿತವಾದವು. ಆದುದರಿಂದ ಸೂಕ್ಷ್ಮ ಕೆತ್ತನೆಗಳಿಗೆ ಅವಕಾಶವಿರಲಿಲ್ಲ. ಚಾಳುಕ್ಯ ಶೈಲಿಯ ಮೊದಲ ಮಂದಿರಗಳು ಚಾಳುಕ್ಯ ಪ್ರದೇಶದಲ್ಲಿ ವಿಪುಲವಾಗಿ ದೊರಕುವ, ಕಣಶಿಲೆಗಿಂತ ಮೃದುವಾದ ಕೆಂಪು ಮರಳ್ಗಲ್ಲಿನಲ್ಲೂ ಅನಂತರದವು ಒಂದು ರೀತಿಯ ಕಪ್ಪುಶಿಲೆ ಯಲ್ಲೂ ನಿರ್ಮಿತವಾಗಿವೆ. ಕಲ್ಲಿನ ಮೃದುತ್ವದ ಕಾರಣದಿಂದ ದ್ರಾವಿಡ ರೀತಿಯ ಬೃಹತ್ಪ್ರಮಾಣದ ಕಟ್ಟಡಗಳನ್ನು ಇವುಗಳಲ್ಲಿ ಕಟ್ಟುವುದು ಸಾಧ್ಯವಿರಲಿಲ್ಲವಾದರೂ ದಕ್ಷಿಣದ ದೇವಾಲಯಗಳಿಗಿಂತಲೂ ಸೂಕ್ಷ್ಮವೂ ಮನೋಜ್ಞವೂ ಆದ ಕೆತ್ತನೆಯ ಕೆಲಸ ಸ್ವಲ್ಪಮಟ್ಟಿಗೆ ಸಾಧ್ಯವಾಯಿತು. ಹೊಯ್ಸಳ ಶಿಲ್ಪಿಗಳು ತಮ್ಮ ಪ್ರದೇಶದಲ್ಲಿ ದೊರಕುತ್ತಿದ್ದ ನಸುಹಸಿರು ಅಥವಾ ಕಪ್ಪು-ನೀಲಿ ಛಾಯೆಯುಳ್ಳ ಬಳಪದ ಕಲ್ಲನ್ನು ತಮ್ಮ ಕಟ್ಟಡಗಳಿಗೆ ಉಪಯೋಗಿಸಲಾರಂಭಿಸಿದರು. ಈ ಕಲ್ಲಿನ ವೈಶಿಷ್ಟ್ಯವೆಂದರೆ ಹೊಸದಾಗಿ ಗಣಿಯಿಂದ ಕತ್ತರಿಸಿ ತೆಗೆದಾಗ ಅದು ಬಹಳ ಮೃದುವಾಗಿದ್ದು ಬಿಸಿಲುಗಾಳಿಗಳ ಪ್ರಭಾವದಿಂದ ಕ್ರಮೇಣ ತನ್ನೊಳಗಿನ ತೇವವನ್ನು ಕಳೆದುಕೊಂಡು ಗಟ್ಟಿಯಾಗುವುದು; ಬಹಳ ಸೂಕ್ಷ್ಮ ಕಣಗಳನ್ನೊಳಗೊಂಡಿದ್ದು ಹೆಚ್ಚು ಸಾಂದ್ರವಾಗಿರುವುದು. ಆದುದರಿಂದ ಆ ಕಲ್ಲಿನಲ್ಲಿ ಬಹಳ ನಯವಾದ ಹಾಗೂ ಸೂಕ್ಷ್ಮವಾದ ಕೆತ್ತನೆಗಳನ್ನು ಮಾಡುವುದು ಸಾಧ್ಯ. ಈ ಮೃದುಮಾಧ್ಯಮದ ಪೂರ್ಣ ಉಪಯೋಗ ಪಡೆದುಕೊಂಡ ವಾಸ್ತುಶಿಲ್ಪಗಳು ಕೇವಲ ಕಲ್ಲಿನ ಕೆಲಸಗಾರರಂತೆ ತಮ್ಮ ಕಟ್ಟಡಗಳನ್ನು ನಿರ್ಮಿಸಲಿಲ್ಲ. ಶ್ರೀಗಂಧ ಮತ್ತು ದಂತದ ಕೆತ್ತನೆಗಾರರ ನಯಗಾರಿಕೆಯನ್ನೂ ಚಿನ್ನದ ಕೆಲಸಗಾರರ ಸೂಕ್ಷ್ಮಕುಸುರಿ ಕೆಲಸದ ಕೌಶಲ್ಯವನ್ನೂ ಚಿತ್ರಗಾರರ ಭಾವ ನಿರೂಪಣಾಚಾತುರ್ಯವನ್ನೂ ತಮ್ಮ ಕಟ್ಟಡಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹೊಯ್ಸಳ ಶೈಲಿಯ ಕಟ್ಟಡ ನಿರ್ಮಾಣದಲ್ಲಿ ವಾಸ್ತುಶಿಲ್ಪಿಯ ಕೈಚಳಕಕ್ಕಿಂತಲೂ ಮೂರ್ತಿಶಿಲ್ಪಿಯ ಅನುಪಮ ಕಲಾವಂತಿಕೆ ಕಾಣಬರುತ್ತದೆ.

ಹೊಯ್ಸಳ ವಾಸ್ತುಶೈಲಿಯ ವಿಶಿಷ್ಟ ಲಕ್ಷಣಗಳನ್ನು ಈ ದೇವಾಲಯಗಳಲ್ಲಿ ಕಂಡುಬರುವ ನಕ್ಷತ್ರಾಕಾರದ ತಲವಿನ್ಯಾಸ, ಜಗತಿ, ಭಿತ್ತಿ ಅಲಂಕರಣ, ಶಿಖರ ಮತ್ತು ಕಂಬಗಳ ರೂಪಗಳಿಂದ ಗುರುತಿಸಬಹುದಾಗಿದೆ.
	ನಕ್ಷತ್ರಾಕಾರದ ತಲವಿನ್ಯಾಸ : ಹೊಯ್ಸಳ ದೇವಾಲಯ ವಿಮಾನಗಳ ತಲವಿನ್ಯಾಸ ಮುಂಚಾಚುವ ಮತ್ತು ಹಿನ್‍ಸರಿಯುವ ಕೋನಗಳಿಂದ ಒಡಗೂಡಿದ ಗೋಡೆಯ ಹೊರಭಾಗದಿಂದ ಕೂಡಿರುತ್ತದೆ. ಒಂದೇ ಕೇಂದ್ರವುಳ್ಳ ಸಮಚೌಕೋನಗಳನ್ನು ಒಂದು ಅಕ್ಷದ ಮೇಲೆ ಸುತ್ತುವುದರಿಂದ ಬೇರೆ ಬೇರೆ ದಿಕ್ಕುಗಳಿಗೆ ಸರಿಹೊಂದುವಂತೆ ಉಂಟಾಗುವ ಕೋನಗಳು ಈ ನಕ್ಷತ್ರಾಕಾರದ ಬಾಹುಗಳಾಗಿರುತ್ತವೆ. ಈ ರೀತಿಯ ಜೋಡಣೆಯಿಂದ 8, 12, 16 ಮುಂತಾಗಿ ಎಷ್ಟು ಕೋನಗಳನ್ನು ಬೇಕಾದರೂ ನಿರ್ಮಿಸಿಕೊಳ್ಳಬಹುದು. ನಕ್ಷತ್ರಾಕಾರದ ಈ ತಲವಿನ್ಯಾಸವನ್ನು ಜಗತಿ ಅಥವಾ ಉಪಪೀಠದಿಂದ ವಿಮಾನದ ತುದಿಯಲ್ಲಿರುವ ಶಿಖರದ ಮೇಲಿನ ಕಲಶದ ವರೆಗೂ ಕೊಂಡೊಯ್ಯಲಾ ಗಿರುತ್ತದೆ. ಆದುದರಿಂದ ಹೊಯ್ಸಳ ಮಂದಿರಗಳ ನಕ್ಷತ್ರಾಕಾರದ ವಿನ್ಯಾಸವನ್ನು ಅಷ್ಟಭದ್ರ ವಿನ್ಯಾಸವೆಂದು ಕರೆಯಲಾಗಿದೆ.

ಜಗತಿ ಅಥವಾ ಉಪಪೀಠ : ಎರಡನೆಯದಾಗಿ ಹೊಯ್ಸಳ ದೇವಾಲಯಗಳನ್ನು ಸಾಮಾನ್ಯವಾಗಿ ಭೂಮಟ್ಟದಿಂದ ಸು. 5 ಅಡಿಗಳೆತ್ತರದ, ದೇವಾಲಯದ ಪ್ರಮಾಣಕ್ಕಿಂತಲೂ ಹೆಚ್ಚು ವಿಸ್ತಾರವಾದ ಜಗತಿಯ ಮೇಲೆ ನಿರ್ಮಿಸಲಾಗಿರುತ್ತದೆ. ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಿದ ಮೃದುವಾದ ಬಳಪದ ಕಲ್ಲಿನಲ್ಲಿ ಎತ್ತರವಾದ ಗೋಡೆಗಳನ್ನು ನಿರ್ಮಿಸಲಾಗುತ್ತಿರಲಿಲ್ಲ. ಆದುದರಿಂದ ಹೊಯ್ಸಳ ಗುಡಿಗಳೂ ಅವುಗಳ ಶಿಖರಗಳೂ ಮಟ್ಟಸವಾಗಿರುತ್ತಿದ್ದುವು. ಈ ಗಿಡ್ಡಾದ ಮಂದಿರಗಳಿಗೆ ಭವ್ಯತೆಯನ್ನೂ ಎತ್ತರದ ಭಾವನೆಯನ್ನೂ ಒದಗಿಸಲು ಈ ಜಗತಿಗಳು ಸಹಾಯಕವಾಗುತ್ತಿದ್ದುವು. ಹೊಯ್ಸಳ ಗುಡಿಗಳ ಒಳಭಾಗದಲ್ಲಿ ಪ್ರದಕ್ಷಿಣ ಮಾರ್ಗವಿರುತ್ತಿರಲಿಲ್ಲ. ಗುಡಿಗೆ ಬಂದ ಭಕ್ತರು ಗೋಡೆಗಳ ಹೊರಮೈ ಮೇಲೆ ರೂಪಿಸಲಾಗಿದ್ದ ಅಪೂರ್ವ ಸೌಂದರ್ಯಯುತ ದೇವದೇವಿಯರ ಪ್ರತಿಮೆಗಳನ್ನೂ ಪೌರಾಣಿಕ ಘಟನೆಗಳನ್ನೂ ನೋಡಿ ಸವಿಯುತ್ತ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲು ದೇವಾಲಯದ ಉದ್ದಗಲಗಳಿಗಿಂತಲೂ ವಿಶಾಲವಾಗಿದ್ದ ಈ ಜಗತಿ ಅವಕಾಶ ಮಾಡಿಕೊಡುತ್ತಿತ್ತು. ಜಗತಿ ಸಹ ಅದರ ಮೇಲಿನ ರೀತಿಯಲ್ಲಿ ನಕ್ಷತ್ರಾಕಾರದಲ್ಲಿ ಇರುತ್ತಿತ್ತು. ಜಗತಿಯ ಒಂದೊಂದು ಕೋನದಲ್ಲೂ ಸಿಂಹ, ಆನೆ ಮುಂತಾದ ಪ್ರಾಣಿಗಳು ಜಗತಿಯ ಕೋನಗಳನ್ನು ಎತ್ತಿಹಿಡಿದಿರುವಂತೆ ನಿರೂಪಿಸಲಾಗಿರುತ್ತದೆ.

	ಭಿತ್ತಿ ಅಲಂಕರಣ : ನಕ್ಷತ್ರಾಕಾರದ ಜಗತಿ ಮತ್ತು ಗೋಡೆಗಳು ದೇವಾಲಯಕ್ಕೆ ಎತ್ತರದ ಭಾವನೆಯನ್ನು ಒದಗಿಸದಿದ್ದರೂ ಗೋಡೆಗಳ ಕೆಳಗಿನ ಅರ್ಧವನ್ನು ಒಂದರಮೇಲೊಂದರಂತೆ ಪೇರಿಸಿದ ಆರೆಂಟು ಸಮತಟ್ಟಾದ ಪಟ್ಟಿಕೆಗಳನ್ನಾಗಿ ವಿಭಾಗಿಸಿರುವುದರಿಂದಲೂ ಶಿಖರದಲ್ಲೂ ಇದೇ ರೀತಿಯ ಸಮತಲದ ಅಂತಸ್ತುಗಳಿರುವುದರಿಂದಲೂ ದೇವಾಲಯಕ್ಕೆ ಎತ್ತರದ ಭಾವನೆಯನ್ನು ಕೊಡುತ್ತವೆ. ವಿಮಾನ ಭಾಗದ ಗೋಡೆಯನ್ನು ಮೂರು ಭಾಗಗಳನ್ನಾಗಿಯೂ ಮಂಟಪದ ಗೋಡೆಗಳನ್ನು ಎರಡು ಭಾಗಗಳನ್ನಾಗಿಯೂ ವಿಂಗಡಿಸಿರುತ್ತಾರೆ. ವಿಮಾನ ಮತ್ತು ಮಂಟಪ, ಅಂದರೆ ಒಟ್ಟು ದೇವಾಲಯದ ಸುತ್ತಲೂ ಗೋಡೆಯ ಕೆಳಭಾಗದಲ್ಲಿ ಮುಂಚಾಚಿದ ಪಟ್ಟಿಕೆಗಳ ಮೇಲೆ ಆನೆ, ಕುದುರೆಸವಾರರು, ಲತಾತೋರಣ, ಸಿಂಹಮುಖ, ಮತ್ತೆ ಲತಾತೋರಣಗಳು, ಅದರ ಮೇಲೆ ಕಣ್ಣಿನ ಎತ್ತರದಲ್ಲಿರುವ ಪಟ್ಟಿಕೆಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತ ಮತ್ತಿತರ ಪೌರಾಣಿಕ ಕಥೆಗಳು ಮತ್ತು ವಿರಳವಾಗಿಯಾದರೂ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಜೀವನಗಳನ್ನು ನಿರೂಪಿಸಿರುವ ಮಾನವರ ಚಿತ್ರಗಳನ್ನೂ ಬಿಡಿಸಲಾಗಿರುತ್ತದೆ. ಅವಕ್ಕೂ ಮೇಲಿನಪಟ್ಟಿಕೆಗಳಲ್ಲಿ ಯಾಳಿ ಅಥವಾ ಮಕರಗಳು ಮತ್ತು ಎಲ್ಲಕ್ಕೂ ಮೇಲಿನ ಸಾಲುಗಳಲ್ಲಿ ಹಂಸಗಳ ಚಿತ್ರಣವಿರುತ್ತವೆ. ಎಲ್ಲ ದೇವಾಲಯಗಳಲ್ಲೂ ಈ ಚಿತ್ರಪಟ್ಟಿಕೆಗಳು ಇದೇ ಅನುಕ್ರಮದಲ್ಲಿರುವುದಿಲ್ಲ. ಆದರೆ ಚಿತ್ರಪಟ್ಟಿಕೆಗಳು ಸಾಮಾನ್ಯವಾಗಿ ಎಲ್ಲ ಮುಖ್ಯದೇವಾಲಯಗಳಲ್ಲೂ ಇರುತ್ತವೆ.

ಮುಂಭಾಗದ ಮಂಟಪದ ಗೋಡೆಗಳಲ್ಲಿ ಈ ಚಿತ್ರಪಟ್ಟಿಕೆಗಳ ಮೇಲಿನ ಭಾಗದಲ್ಲಿ ವಿಶಾಲವಾದ ಅಂಕಣ ಚಿತ್ರಫಲಕಗಳೋ ಜಾಲಂಧ್ರಗಳೋ ಇರುತ್ತವೆ. ಕಲ್ಲುಚಪ್ಪಡಿಗಳಲ್ಲಿ ಮಾಡಿದ ಈ ಜಾಲಂಧ್ರಗಳ ಮೇಲೂ ಹೊಯ್ಸಳ ಶಿಲ್ಪಿಗಳು ಹಲವು ರೀತಿಯ ನಕ್ಷೆಗಳನ್ನು-ಹೂವು, ಬಳ್ಳಿ, ಜ್ಯಾಮಿತಿಕ ವಿನ್ಯಾಸಗಳನ್ನು-ಬಿಡಿಸಿ ಜಾಲಂಧ್ರಗಳ ಸೌಂದರ್ಯವನ್ನು ಹೆಚ್ಚಿಸಿರುತ್ತಾರೆ. ಅಂಕಣ ಚಿತ್ರಫಲಕಗಳ ಮೇಲೆ ರಾಜರ ದರ್ಬಾರು, ಪೌರಾಣಿಕ ಘಟನೆಗಳ ನಿರೂಪಣೆ, ಶಿವ, ವಿಷ್ಣು ಮುಂತಾದ ಅಧಿದೇವತೆಗಳ ಮತ್ತು ಅವರ ಪರಿವಾರ ದೇವತೆಗಳ ಚಿತ್ರಣಗಳನ್ನು ಕೆತ್ತಿ ಅವುಗಳ ಅಲಂಕರಣದೊಂದಿಗೆ ಭಕ್ತಜನರಿಗೆ ಉಪಯುಕ್ತವಾದ ಧಾರ್ಮಿಕ ಪರಿಸರವನ್ನು ನಿರ್ಮಿಸಿರುತ್ತಾರೆ. ವಿಮಾನದ ಹೊರಗೋಡೆಗಳ ಮೇಲೆ ಕೆಳಭಾಗದಲ್ಲಿ ಮಂಟಪದ ಗೋಡೆಗಳ ಮೇಲಿರುವಂತೆ ಅಡ್ಡ ಚಿತ್ರ ಪಟ್ಟಿಕೆಗಳಿರುತ್ತವೆ. ಅವುಗಳ ಮೇಲೆ ತಮ್ಮ ಶಿಲ್ಪರಚನಾಚಾತುರ್ಯಕ್ಕೆ ಸಾಕ್ಷಿಗಳಾದ ದೇವದೇವತೆಗಳ ದೊಡ್ಡ ಪ್ರಮಾಣದ-2ರಿಂದ 3 ಅಡಿಗಳೆತ್ತರದ-ವಿಗ್ರಹಗಳನ್ನು ಕಡೆಯಲಾಗಿರು ತ್ತದೆ. ಒಂದೊಂದು ಗುಂಪಿನ ವಿಗ್ರಹಗಳಿಗೂ ಪ್ರತ್ಯೇಕವಾದ ಗೂಡು ಅಥವಾ ಫಲಕಗಳೂ ಪ್ರಭಾವಳಿ ಆಕಾರದ ಲತಾತೋರಣಗಳೂ ಇರುತ್ತವೆ. ಕೆಲವು ಬಾರಿ ಈ ದೇವದೇವಿಯರು, ಪೌರಾಣಿಕ ವ್ಯಕ್ತಿಗಳು, ಲತಾಕುಂಜದೊಳಗೆ ಇದ್ದಾರೇನೋ ಎಂಬ ಕಲ್ಪನೆ ಉಂಟಾಗುತ್ತದೆ. ಈ ಒಂದೊಂದು ವಿಗ್ರಹವೂ ಗೋಡೆಯ ಅಂಗವಾಗಿರುವಂತೆ ಭಾಸವಾಗುವ ಬದಲು ತಮ್ಮದೇ ಆದ ಸಣ್ಣ ಗುಡಿಗಳಲ್ಲಿರುವಂತೆ ತೋರುತ್ತದೆ. ನಕ್ಷತ್ರಾಕಾರದ ಹಿಂದೆ ಮುಂದೆ ಸರಿದಂತಿರುವ ಗೋಡೆಯ ವಿನ್ಯಾಸದಿಂದ ಕೆಲವು ವಿಗ್ರಹಗಳ ಮೇಲೆ ಹೆಚ್ಚಿನ ಬೆಳಕೂ ಮತ್ತೆ ಕೆಲವು ವಿಗ್ರಹಗಳ ಮೇಲೆ ನೆರಳೂ ಬೀಳುತ್ತದೆ. ಈ ನೆರಳು-ಬೆಳಕುಗಳ ಪ್ರಭಾವ ವಿಗ್ರಹಗಳ ಸರಸ-ಸೌಮ್ಯ ಅಥವಾ ರುದ್ರ-ಬೀಭತ್ಸ ಭಾವಗಳ ಮೇಲೆ ಆಗುವಂತೆ ಅವುಗಳ ಸ್ಥಳನಿರ್ದೇಶನ ಮಾಡಿರುವುದು ಶಿಲ್ಪಿಗಳ ಕಲ್ಪನಾಶಕ್ತಿಯ ಸಾಕ್ಷ್ಯಗಳಾಗಿವೆ. ಮೂರನೆಯ ಮತ್ತು ಎಲ್ಲಕ್ಕೂ ಮೇಲಿನ ವಿಭಾಗದಲ್ಲಿ ಅರೆಗಂಬ, ಕಲಶ ಮತ್ತು ಶಿಖರಗಳ ವಿನ್ಯಾಸಗಳನ್ನು ಕೆತ್ತಲಾಗುತ್ತದೆ. ದ್ರಾವಿಡ ಗುಡಿಗಳ ಹೊರಗೋಡೆಗಳ ಮೇಲಿರುವ ಈ ಅರೆಗಂಬ-ಗೂಡುಗಳು ಆ ಗುಡಿಗಳ ವಾಸ್ತುವಿನ್ಯಾಸದಲ್ಲಿ ಪ್ರಮುಖ ಲಕ್ಷಣಗಳಾಗಿವೆ; ಹೊಯ್ಸಳ ಗುಡಿಗಳಲ್ಲಿ ಅವು ಸೂರಿನ ಕೆಳಗೆ ಮಟ್ಟಸವಾಗಿದ್ದು ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡಿವೆ. ಭಿತ್ತಿಯ ಮೇಲಿನ ಚಿಕ್ಕ ಚಿಕ್ಕ ಅಲಂಕರಣ ಶಿಖರಗಳ ವಿನ್ಯಾಸಗಳಲ್ಲಿ ಹೊಯ್ಸಳ ಶೈಲಿಯ ಶಿಖರ ಪ್ರಭೇದಗಳನ್ನೆಲ್ಲ ಕಾಣಬಹುದು.

	ವಿಮಾನದ ಮೇಲಿನ ಶಿಖರಗಳು : ಹೊಯ್ಸಳ ದೇವಾಲಯಗಳಲ್ಲಿ ಎದ್ದು ಕಾಣುವ ವಿಭಾಗವೆಂದರೆ ಶಿಖರ. ದೇವಾಲಯ ನಿರ್ಮಾಣಕ್ಕೆ ಉಪಯೋಗಿಸಿದ ಮೃದುವಾದ ಕಲ್ಲು ಮತ್ತು ಅದರಿಂದ ಉಂಟಾದ ಅಭದ್ರತೆಯ ಫಲವಾಗಿ ಬಹುಮಟ್ಟಿನ ದೇವಾಲಯಗಳಲ್ಲಿ ಶಿಖರಗಳು ಕಣ್ಮರೆಯಾಗಿಹೋಗಿವೆ. ದೊಡ್ಡಗದ್ದವಳ್ಳಿ, ಸೋಮನಾಥಪುರ, ಭದ್ರಾವತಿ, ನುಗ್ಗೇಹಳ್ಳಿ ಮುಂತಾದ ಸ್ಥಳಗಳಲ್ಲಿರುವ ದೇವಾಲಯಗಳ ಮೇಲೆ ಉಳಿದುಬಂದಿರುವ ಶಿಖರಗಳಿಂದಲೂ ಹೊರಗೋಡೆಗಳ ಮೇಲಿನ ಚಿತ್ರಪಟ್ಟಿಕೆಗಳಲ್ಲಿ ಕೆತ್ತಲಾದ ಶಿಖರಗಳ ಅವಗಾಹನೆಯಿಂದಲೂ ಈ ಶಿಖರಗಳ ಆಕಾರ-ವಿನ್ಯಾಸಗಳನ್ನು ಅಭ್ಯಸಿಸಬಹುದಾಗಿದೆ. ವಿಮಾನದ ಕೆಳಭಾಗದ ಗೋಡೆಗಳಿಂದ ಶಿಖರಭಾಗವನ್ನು ಅಗಲವಾದ ಸೂರುಗಳಿಂದ ಪ್ರತ್ಯೇಕಿಸಿದರೂ ನಕ್ಷತ್ರಾಕಾರದ ವಿನ್ಯಾಸವನ್ನು ಶಿಖರಾಗ್ರದವರೆಗೂ ಕೊಂಡೊಯ್ಯಲಾಗಿರುತ್ತದೆ. ಶಿಖರದ ಊಧ್ರ್ವತ್ವದ ಭಾವನೆಯನ್ನು ಸಮತಟ್ಟಾದ ಅಂತಸ್ತುಗಳು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತವೆ. ಕ್ರಮೇಣ ಸಣ್ಣದಾಗುತ್ತಿರುವ ಅಂತಸ್ತುಗಳು ಶಿಖರದ ಮನೋಜ್ಞ ಸೌಂದರ್ಯವನ್ನು ಹೆಚ್ಚಿಸುತ್ತವೆ. ಶಿಖರದ ತುದಿಯಲ್ಲಿ ಛತ್ರಾಕಾರದ ಕಲಶವಿರುತ್ತದೆ. ಶಿಖರದ ಮೇಲಿರುವ ಉದ್ದ ಮತ್ತು ಅಡ್ಡಪಟ್ಟಿಕೆಗಳ ಮೇಲೆ ವೈವಿಧ್ಯಮಯವಾದ ಸೂಕ್ಷ್ಮ ಪ್ರಮಾಣದ ಗುಡಿಗಳನ್ನೂ ಗೂಡುಗಳನ್ನೂ ಕೆತ್ತಲಾಗಿರುತ್ತದೆ. ಶಿಖರದ ಈ ಅಡ್ಡ ಪಟ್ಟಿಕೆಗಳು ಮುಂಚಾಚಿಕೊಂಡು ತಮ್ಮ ಕೆಳಗಿನ ಮತ್ತು ಮೇಲಣ ಪಟ್ಟಿಕೆಗಳಿಂದ ತುಸು ಅಂತರಗಳನ್ನು ಹೊಂದಿರುವುದರಿಂದ ಪ್ರತಿಯೊಂದೂ ಪ್ರತ್ಯೇಕವಾಗಿರುವಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಈ ರೀತಿಯ ಶಿಖರಗಳು ಮಟ್ಟಸವಾಗಿರುವುದರಿಂದ ಎದ್ದುಕಾಣುವುದಿಲ್ಲವಾದರೂ ಅವುಗಳ ಮೇಲಿನ ಕೆತ್ತನೆಗಳ ಭವ್ಯತೆಯಿಂದ ನೋಡುಗರ ಗಮನವನ್ನು ತಮ್ಮಲ್ಲಿ ಹಿಡಿದಿಡುವ ಶಕ್ತಿಯನ್ನು ಪಡೆದಿರುತ್ತವೆ. ಶಿಖರದ ಮೆಟ್ಟಿಲುಮೆಟ್ಟಿಲಾದ ಅಂತಸ್ತುಗಳ ಮೇಲೆ ಸಿಂಹಮುಖಗಳು, ಲತೆಗಳು ಮತ್ತು ದೇವತಾವಿಗ್ರಹಗಳನ್ನು ಸುಂದರವಾಗಿ ಕೆತ್ತಲಾಗಿದೆ. ಛತ್ರಾಕಾರದ ಕಲಶದ ಕಲ್ಲಿನ ಮೇಲೆ ಅಮೃತಕಲಶ, ಶಲಾಕೆ ಮತ್ತು ಪ್ರಾಸಾದ ಪುರುಷಮೂರ್ತಿಗಳನ್ನು ಕಡೆದಿರುತ್ತಾರೆ. ಸುಕನಾಸಿಯ ಚಾವಣಿಯ ಮೇಲಕ್ಕೆ ಪಸರಿಸಿರುವ ಶಿಖರದ ಮುಂಚಾಚಿನ ಮೇಲೆ ಹೊಯ್ಸಳ ಲಾಂಛನವಾದ ಸಳ ಹುಲಿಯನ್ನು ಕೊಲ್ಲುತ್ತಿರುವುದನ್ನು ನಿರೂಪಿಸುವ ಶಿಲ್ಪವಿರುತ್ತದೆ. ಕಟ್ಟಡಕ್ಕೆ ಉಪಯೋಗಿಸುವ ಮೃದುಕಲ್ಲಿನ ಗೋಡೆಗಳು ದ್ರಾವಿಡ ರೀತಿಯ ಬೃಹತ್ ಶಿಖರಗಳ ಭಾರವನ್ನು ಹೊರಲು ಅಸಮರ್ಥವಾಗಿದ್ದುದರಿಂದ ಸಣ್ಣವಾದರೂ ಸುಂದರ ಕೆತ್ತನೆಗಳಿಂದ ಅಲಂಕೃತವಾದ ಈ ಶಿಖರಗಳು ಇಡೀ ದೇವಾಲಯ ಭಾಗದಲ್ಲಿ ಕಲಾ ದೃಷ್ಟಿಯಿಂದ ಗಮನಾರ್ಹ ಅಂಗಗಳಾಗಿರುತ್ತವೆ.

ಕಂಬಗಳು : ಹೊಯ್ಸಳ ದೇವಾಲಯಗಳ ಕಂಬಗಳು ಸಹ ವಿಶಿಷ್ಟವಾದವು. ಅವು ಸಾಮಾನ್ಯವಾಗಿ ದ್ರಾವಿಡ ರೀತಿಯ ಕಂಬಗಳ ಮತ್ತು ಚೌಕೋನ ಆಕಾರದ ಬೋದಿಗೆಗಳ ಅನುಕರಣೆಯಾಗಿದ್ದರೂ ಚಾಳುಕ್ಯ ದೇವಾಲಯಗಳ ಕಂಬಗಳ ಪ್ರಭಾವಕ್ಕೊಳಗಾಗಿ ಕಡೆತಯಂತ್ರದ ಮೇಲೆ ತಿರುಗಿಸಲಾಗಿರುವುದರಿಂದ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಹೊಯ್ಸಳ ಕಾಲದ ಶಿಲ್ಪಿಗಳು ಬಳಪದ ಕಲ್ಲಿನಲ್ಲಿ ಮೊದಲಿಗೆ ದಿಮ್ಮಿಗಳನ್ನು ಬೇಕಾದ ಆಕಾರ-ಪ್ರಮಾಣಗಳಿಗೆ ಕಡೆದು ಅನಂತರ ಚಕ್ರಗಳ ಮೇಲೆ ದಿಮ್ಮಿಗಳನ್ನು ನೆಟ್ಟಗೆ ನಿಲ್ಲಿಸಿ ತಿರುಗಿಸುತ್ತ ಉಕ್ಕಿನ ಉಳಿಗಳ ಸಹಾಯದಿಂದ ದಿಮ್ಮಿಗಳ ಮೇಲೆ ಉಂಗುರಾಕಾರದ ಮತ್ತು ಇತರ ವಿನ್ಯಾಸಗಳನ್ನು ಬಿಡಿಸುತ್ತಿದ್ದರು. ಒಂದೇ ಕಲ್ಲಿನ ಈ ಕಂಬಗಳ ತಳಭಾಗ ಚದುರವಾಗೂ ಮಧ್ಯಭಾಗ ಬುಡಮೇಲು ಮಾಡಿದ ಘಂಟೆ ಅಥವಾ ಕಮಲದ ಆಕಾರದಲ್ಲೂ ಅಗ್ರಭಾಗ ಗ್ರೀವದ ಮೇಲೆ ಚಕ್ರಾಕಾರದಲ್ಲೂ ಇರುತ್ತವೆ. ಕೆಲವು ವೇಳೆ ಈ ಅಗ್ರಭಾಗದ ಚಕ್ರ ಎರಡೆರಡು ಬಾರಿ ಇದ್ದು ಅವುಗಳ ನಡುವೆ ಕಮಲದ ಆಕಾರದ ಒಂದು ಅಂಗವಿರುತ್ತದೆ. ಅದರ ಮೇಲೆ ವಿವಿಧ ಅಲಂಕರಣಗಳುಳ್ಳ ಚೌಕನಾದ ಬೋದಿಗೆಗಳು ಚಾವಣಿಯ ದೂಲಗಳಿಗೆ ಆಧಾರವಾಗಿರುತ್ತವೆ. ನವರಂಗದ ಕಂಬಗಳ ಮತ್ತು ಹೊರಗೋಡೆಯ ಅರೆಗಂಬಗಳ ಮೇಲೆ ಈ ಬೋದಿಗೆ ಮತ್ತು ದೂಲಗಳ ನಡುವೆ ಮುಂಬಾಗಿದಂತೆ ನಿಲ್ಲಿಸಲಾದ ಸಾಲಭಂಜಿಕಾ ಅಥವಾ ಮದನಿಕಾ ವಿಗ್ರಹಗಳೂ ಇರುವುದುಂಟು. ಈ ಕಂಬಗಳ ಮೇಲ್ಭಾಗದಲ್ಲಿ ವಿವಿಧ ಸುಂದರ ಕೆತ್ತನೆಗಳನ್ನು ಮಾಡಲಾಗಿರುತ್ತದೆ. ಸಾಮಾನ್ಯವಾಗಿ ಒಂದು ದೇವಾಲಯದೊಳಗಿನ ಕಂಬಗಳು ಅಲಂಕರಣ ವೈವಿಧ್ಯದಿಂದ ಒಂದರಂತೆ ಮತ್ತೊಂದು ಇರುವುದಿಲ್ಲ. ನವರಂಗದ ನಾಲ್ಕು ಕಂಬಗಳಲ್ಲಿ ಶಿಲ್ಪಿಗಳು ತಮ್ಮ ಚಾತುರ್ಯದ ಪರಮಾವಧಿಯನ್ನು ಪ್ರದರ್ಶಿಸುತ್ತಾರೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ಸಾಮಾನ್ಯವಾಗಿ ಕಂಬದ ಇಡೀ ಮೇಲ್ಮೈ ಕೆತ್ತನೆಗಳಿಂದ ತುಂಬಿದ್ದರೂ ಎಲ್ಲಿಯಾದರೂ ಅಲ್ಪ ಸ್ವಲ್ಪ ಬಿಡಿಸ್ಥಳವಿದ್ದುದೇ ಆದರೆ ಆ ಭಾಗಕ್ಕೆ ಕೊಟ್ಟಿರುವ ಹೊಳಪಿನಿಂದ ಕನ್ನಡಿಯ ಬೆಳಕು ಪ್ರತಿಫಲಿಸುತ್ತದೆ. ಕೆಲವು ಕಂಬಗಳ ಮಧ್ಯಭಾಗವನ್ನು ಹೊಳಪು ಮಾಡುವುದಕ್ಕಾಗಿಯೇ ಕೆತ್ತನೆಗಳಿಲ್ಲದೆ ತೆರವಾಗಿ ಬಿಟ್ಟಿರುತ್ತಾರೆ.

ಮೇಲೆ ಹೇಳಿದ ಲಕ್ಷಣಗಳಲ್ಲಿ ಕೆಲವನ್ನು ಉತ್ತರ ಕರ್ನಾಟಕ ಪ್ರದೇಶದ ಆದಿಕಾಲದ ಬಾದಾಮಿ ಚಳುಕ್ಯರ ಕೆಲವು ದೇವಾಲಯಗಳಲ್ಲೂ ಸೇವುಣರ ಕಾಲದ ಕೆಲವು ಹೇಮಾದ್ರಿಪಂಥದ ಗುಡಿಗಳಲ್ಲೂ ಬಿಡಿಬಿಡಿಯಾಗಿ ಕಾಣಬಹುದಾಗಿದ್ದು ಹೊಯ್ಸಳ ವಾಸ್ತುಶಿಲ್ಪಿಗಳು ಈ ಲಕ್ಷಣಗಳನ್ನು ಹೊಸದಾಗಿ ಕಂಡುಹಿಡಿದರೆಂದು ಹೇಳಲು ಸಾಧ್ಯವಿಲ್ಲ. ಆದರೆ ಮೇಲಿನ ಎಲ್ಲ ಅಂಶಗಳನ್ನು ಮೃದುವಾದ ಬಳಪದ ಕಲ್ಲಿನಲ್ಲಿ ನಿರ್ಮಿಸಿದ ತಮ್ಮ ದೇವಾಲಯಗಳಲ್ಲಿ ಸಮನ್ವಯಗೊಳಿಸಿ ಅಳವಡಿಸಿಕೊಂಡಿರುವುದಲ್ಲದೆ ಈ ಅಂಶಗಳಿಗೆ ತಮ್ಮ ನೈಪುಣ್ಯದಿಂದ ಹೊಸರೂಪ ಕೊಟ್ಟಿರುವುದು ಅವರ ರಚನಾಕೌಶಲಕ್ಕೆ ಉತ್ತಮ ನಿದರ್ಶನ. ಡೊಂಕುಡೊಂಕಾದ ಗೋಡೆಗಳ ವಿನ್ಯಾಸದಿಂದ ದೊರಕಿದ ಹೆಚ್ಚು ಪ್ರದೇಶದ ಪ್ರತಿಯೊಂದು ಅಂಗುಲವನ್ನು ತಮ್ಮ ಅಮೋಘ ಕೆತ್ತನೆಗಳಿಗೆ ಉಪಯೋಗಿಸಿಕೊಂಡು ದೇವಾಲಯವನ್ನು ಒಂದು ವಾಸ್ತುನಿರ್ಮಾಣವೆನ್ನು ವುದಕ್ಕಿಂತಲೂ ಕಲೆಯ ಪ್ರದರ್ಶನಾಲಯವೆಂಬಂತೆ ಮಾಡಿರುವುದೇ ಹೊಯ್ಸಳ ಶಿಲ್ಪಿಗಳ ಅನುಪಮ ಕಾಣಿಕೆ ಎಂದು ಹೇಳಬಹುದು. ಬೇಲೂರು, ಹಳೇಬೀಡು ದೇವಾಲಯಗಳ ಬಾಗಿಲುಗಳ ಮೇಲಿನ ಮಕರ ತೋರಣಗಳಲ್ಲಿ ಕಾಣುವ ಸೂಕ್ಷ್ಮತರವಾದ ಕೆತ್ತನೆ ಅಕ್ಕಸಾಲಿಗರ ಕುಸುರಿ ಕೆಲಸವನ್ನೂ ಮೀರಿಸುವಂಥದು. ಬೇಲೂರು ದೇವಾಲಯದ ಕೆಲವು ಕಂಬಗಳ ಮೇಲಿನ ಸೂಕ್ಷ್ಮಕೆತ್ತನೆಗಳು ರೂವಾರಿಗಳ ಕಲಾಪ್ರೌಢಿಮೆಯ ಅಪೂರ್ವ ನಿದರ್ಶನಗಳು. ಶಿಲಾಬಾಲಿಕೆಯರೆಂದು ಪ್ರಸಿದ್ಧವಾಗಿರುವ ಸಾಲಭಂಜಿಕೆಗಳು-ಅದರಲ್ಲೂ ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗದ ಕಂಬಗಳ ಮೇಲಿರುವ ನಾಲ್ಕು ವಿಗ್ರಹಗಳು ಹೊಯ್ಸಳ ಶಿಲ್ಪಿಗಳನ್ನು ಅಮರಕೀರ್ತಿಭಾಜನರನ್ನಾಗಿಸಿವೆ.

	ಹೊಯ್ಸಳ ಶೈಲಿಯ ಪರಿಪಕ್ವ  ಗುಡಿಗಳಲ್ಲಿ ವಿಮಾನ, ಸುಕನಾಸಿ, ನವರಂಗ ಮತ್ತು ಮುಖಮಂಟಪಗಳು ಮುಖ್ಯಭಾಗಗಳಾಗಿರುತ್ತವೆ. ಇವಿಷ್ಟು ಭೂಮಟ್ಟದಿಂದ ಸು.5 ಅಡಿಗಳೆತ್ತರದ ಮತ್ತು ದೇವಾಲಯದ ವಿಸ್ತೀರ್ಣಕ್ಕಿಂತ ವಿಶಾಲವಾದ ಜಗತಿಯ ಮೇಲೆ ಇರುತ್ತವೆ. ಗರ್ಭಗುಡಿ ಅಥವಾ ವಿಮಾನ ನಕ್ಷತ್ರಾಕಾರದ ತಲವಿನ್ಯಾಸದ ಮೇಲೆ ಚತುರಸ್ರವಾಗಿರು ತ್ತದೆ. ಅದರ ಮಧ್ಯದಲ್ಲಿರುವ ಪಿಂಡಿಕೆಯ ಮೇಲೆ ಪ್ರಭಾವಳಿ, ಲತಾತೋರಣ ಮತ್ತು ಕೀರ್ತಿಮುಖಗಳಿಂದೊಡಗೂಡಿದ ಮೂಲವಿಗ್ರಹ ವಿರುತ್ತದೆ. ಅಭಿಷೇಕಜಲ ಎಡಭಾಗದಿಂದ ಹರಿದುಹೋಗಿ ಹೊರ ಅಂಗಳದಲ್ಲಿರುವ ತೀರ್ಥದ ಹೊಂಡವನ್ನು ಸೇರಲು ಸೂಕ್ತವಾದ ವ್ಯವಸ್ಥೆ ಮಾಡಲಾಗಿರುತ್ತದೆ. ಹೊಯ್ಸಳ ದೇವಾಲಯಗಳಲ್ಲಿ ಒಂದು, ಎರಡು, ಮೂರು, ನಾಲ್ಕು ಅಥವಾ ಐದು ಗರ್ಭಗುಡಿಗಳಿರುವುದುಂಟು. ಅನುಕ್ರಮವಾಗಿ ಅವನ್ನು ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ ಮತ್ತು ಪಂಚಕೂಟ ಮಂದಿರಗಳೆಂದು ಕರೆಯಲಾಗುತ್ತದೆ. ಪ್ರತಿಯೊಂದು ಗರ್ಭಗುಡಿಗೂ ಪ್ರತ್ಯೇಕ ಸುಕನಾಸಿ ಇರುತ್ತದೆ. ಏಕಕೂಟ ಮತ್ತು ತ್ರಿಕೂಟ ಗುಡಿಗಳಲ್ಲಿ ಒಂದೇ ನವರಂಗದೊಡನೆ ಸುಕನಾಸಿಗಳು ಸೇರುತ್ತವೆ. ಕೆಲವು ದ್ವಿಕೂಟಾಚಲಗಳಲ್ಲಿ ಪ್ರತ್ಯೇಕ ನವರಂಗ ಭುವನೇಶ್ವರಿ ಗಳು ಇರುತ್ತವೆ. ಚತುಷ್ಕೂಟ ಮತ್ತು ಪಂಚಕೂಟ ಮಂದಿರಗಳಲ್ಲಿ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ನವರಂಗಗಳಿರುತ್ತವೆ.

	ಸುಕನಾಸಿ ಗರ್ಭಗುಡಿಗೂ ರಂಗಮಂಟಪಕ್ಕೂ ನಡುವೆ ಉತ್ಸವ ವಿಗ್ರಹಗಳನ್ನಿಡಲು ಉಪಯೋಗಿಸುವ ಸ್ಥಾನ, ಅದರ ದ್ವಾರಬಂಧದ ಮೇಲೆ ಗಜಲಕ್ಷ್ಮಿ ಅಥವಾ ಬೇರೆ ವಿಗ್ರಹಗಳು, ಪಕ್ಕಗಳಲ್ಲಿ ದ್ವಾರಪಾಲಕರು, ಲತಾಪಟ್ಟಿಕೆಗಳು ಇರುತ್ತವೆ. ಅದರ ಮುಂದಿನ ಭಾಗವೇ ನವರಂಗ. ನವರಂಗದ ಮಧ್ಯಭಾಗದ ನಾಲ್ಕು ಕಂಬಗಳು ಚಾವಣಿಯ ಭುವನೇಶ್ವರಿಗೆ ಆಧಾರಗಳಾಗಿರುತ್ತವೆ. ಭುವನೇಶ್ವರಿಯ ಎಂಟು ಮೂಲೆಗಳಲ್ಲಿ ದಿಕ್ಪಾಲಕರ ಮೂರ್ತಿಗಳಿರುತ್ತವೆ. ಮಧ್ಯ ಅಂಕಣದ ಚಾವಣಿ ಮಗುಚಿಹಾಕಿದ ಕಮಲದಾಕಾರದಲ್ಲಿರುತ್ತದೆ. ಅದರ ದಳಗಳ ಮೇಲೆ ಸಂದರ್ಭೋಚಿತವಾದ ದೇವತಾಮೂರ್ತಿಗಳ ಪೌರಾಣಿಕ ಘಟನೆಗಳ ಕೆತ್ತನೆಗಳಿರುತ್ತವೆ. ಪುಷ್ಪದ ಕೇಸರ ನೇತಾಡುತ್ತಿರುವ ತುಂಡು ಕಂಬವನ್ನು ಹೋಲುತ್ತಿದ್ದು ಅದರ ತುದಿಯಲ್ಲಿ ನರಸಿಂಹ, ನಟರಾಜ ಮುಂತಾದ ಮೂರ್ತಿಗಳನ್ನು ಕೆತ್ತಲಾಗಿರುತ್ತದೆ. ನವರಂಗ ಪ್ರಧಾನ ದೇವತಾಪೂಜಾಕಾಲದಲ್ಲಿ ಸಂಗೀತ, ನೃತ್ಯ ಮುಂತಾದ ಕಲಾಸೇವೆಗಾಗಿ ಉಪಯೋಗಿಸುತ್ತಿದ್ದ ಸ್ಥಳ. ಅಂತೆಯೇ ಶಿಲ್ಪಿ ಅದರ ಮೇಲಿನ ಭುವನೇಶ್ವರಿಯ ಕೆತ್ತನೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿರುತ್ತಾನೆ. ಈ ದೃಷ್ಟಿಯಲ್ಲಿ ನೋಡಿದರೆ ಬೇಲೂರಿನ ಚೆನ್ನಕೇಶವ ಗುಡಿಯ ಭುವನೇಶ್ವರಿಯ ಸೊಬಗು ಅನುಪಮವಾದುದು. ಅದರ ಮುಂಭಾಗದ ಮಂಟಪ ಕೆಲವೆಡೆ ಮೊದಲಿಗೆ ತೆರೆದಿರುತಿದ್ದಿತು. ಕಾಲಕ್ರಮದಲ್ಲಿ ಅಲ್ಲೂ ಚಾವಣಿಯ ವರೆಗೆ ಗೋಡೆಗಳನ್ನು ನಿರ್ಮಿಸಿದುದ ರಿಂದ ದೇವಾಲಯದ ಒಳಭಾಗಕ್ಕೆ ಗಾಳಿ ಬೆಳಕುಗಳ ಆವಶ್ಯಕತೆಯನ್ನು ಪೂರೈಸುವ ಸಲುವಾಗಿ ಗೋಡೆಯ ಮೇಲರ್ಧಭಾಗದಲ್ಲಿ ಚಿತ್ರರಂಜಿತವಾದ ಜಾಲಂಧ್ರಗಳನ್ನು ಸೇರಿಸುವ ಪರಿಪಾಠ ಕಾಣುತ್ತದೆ. ಭಕ್ತಾದಿಗಳು ದೇವರಸೇವೆ ಮತ್ತು ದರ್ಶನಮಾಡಲು ಈ ಮಂಟಪದಲ್ಲಿ ಕೂಡುತ್ತಿದ್ದರು. ಕೆಲವು ಹೊಯ್ಸಳ ದೇವಾಲಯಗಳಲ್ಲಿ ಎರಡೆರಡು ಚಾವಣಿಗಳಿರುತ್ತಿದ್ದು ಅವುಗಳ ನಡುವಣ ಅಂತಸ್ತಿನಲ್ಲಿ ದೇವಾಲಯದ ಬೆಲೆಬಾಳುವ ವಸ್ತುಗಳನ್ನು ಶೇಖರಿಸಿಡಲಾಗುತ್ತಿತ್ತು.

ದೇವಾಲಯದ ಹೊರಗಿನ ಪ್ರಾಂಗಣದಲ್ಲಿ ಬಲಿಪೀಠ. ಗರುಡ ಅಥವಾ ನಂದಿಪೀಠ, ಧ್ವಜಸ್ತಂಭ ಮುಂತಾದ ಮೂಲವಿಗ್ರಹದ ನೇರ ನೋಟಕ್ಕೆ ಬೀಳುವಂತೆ ಇರುತ್ತವೆ. ದೇವಾಲಯಗಳ ವಿಸ್ತಾರ ಹೆಚ್ಚುತ್ತಹೋದಂತೆ ಪ್ರಾಂಗಣದಲ್ಲಿ ದೇವಿ, ಪರಿವಾರದೇವತೆಗಳು, ಸಪ್ತಮಾತೃಕೆಯರು, ನವಗ್ರಹಗಳು ಮೊದಲಾದವರಿಗೆ ಗುಡಿಗಳನ್ನೂ ಹೊರಪ್ರಾಕಾರದ ಗೋಡೆಗಳಿಗೆ ಹೊಂದಿಕೊಂಡಿರುವ ಕಂಬಗಳಿಂದ ಕೂಡಿದ ಕೈಸಾಲೆಯ ಹಿಂಬದಿಯಲ್ಲಿ ಯಾಗಶಾಲೆ, ಪಾಠಶಾಲೆ, ಉತ್ಸವ ವಾಹನಗಳ ಮಂಟಪ ಮುಂತಾದುವನ್ನೂ ಪ್ರಾಂಗಣದ ಒಂದೆಡೆ ಕಲ್ಯಾಣಮಂಟಪ, ಈಶಾನ್ಯಮೂಲೆಯಲ್ಲಿ ಕಲ್ಯಾಣಿ ಅಥವಾ ದೇವಾಲಯದ ಕೊಳಗಳನ್ನೂ ನಿರ್ಮಿಸುವ ಪರಿಪಾಠ ರೂಢಿಗೆ ಬಂತು.

ಈ ಎಲ್ಲ ವಿಷಯಗಳಿಂದ ತಿಳಿದು ಬರುವಂತೆ ಹೊಯ್ಸಳ ದೇವಾಲಯಗಳು ದ್ರಾವಿಡ ಶೈಲಿಯ ತಳಹದಿಯ ಮೇಲೆ ಆಧಾರಿತವಾಗಿದ್ದರೂ ಹೊಯ್ಸಳ ವಾಸ್ತುಶಿಲ್ಪಗಳ ಸೃಜನಶೀಲ ಕೈಗಳಲ್ಲಿ ಅವು ತಮ್ಮದೇ ಆದ ವೈಶಿಷ್ಟ್ಯಗಳನ್ನು ಪಡೆದುಕೊಂಡವು. ದ್ರಾವಿಡ ವಾಸ್ತುಲಕ್ಷಣಗಳನ್ನು ತಮ್ಮ ಭಾವನೆಗಳಿಗೆ ಸರಿಹೊಂದುವಂತೆ ಮಾರ್ಪಡಿಸಿಕೊಂಡು ಈ ಶಿಲ್ಪಿಗಳು ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಭಾವನೆಗಳು ಮತ್ತು ತತ್ಫಲವಾದ ಮಾರ್ಪಾಡುಗಳು ವಾಸ್ತುಶಿಲ್ಪಿಯ ದೃಷ್ಟಿಕೋನಕ್ಕೆ ಸರಿ ಹೊಂದುವುಗಳಾಗಿಲ್ಲದೆ ಕಲಾಕಾರನ ದೃಷ್ಟಿಕೋನಕ್ಕೆ ಸರಿಹೊಂದುವಂಥವು. ಪರ್ಸಿಬ್ರೌನನ ಮಾತುಗಳಲ್ಲಿ ಹೇಳುವುದಾದರೆ ಹೊಯ್ಸಳ ದೇವಾಲಯಗಳು ವಾಸ್ತುನಿರ್ಮಾಣಗಳೆನ್ನುವುದಕ್ಕಿಂತ ಪ್ರಯೋಗಾತ್ಮಕ ಕಲಾಮಂದಿರಗಳಾಗಿವೆ. ದೇವಾಲಯದ ಹೊರಗೋಡೆಗಳ ಮೇಲಿನ ವಿಗ್ರಹಗಳು ಒಂದೊಂದೂ ತಮ್ಮದೇ ಆದ ಪ್ರತ್ಯೇಕ ಸನ್ನಿವೇಶವನ್ನು ಪ್ರತಿನಿಧಿಸುತ್ತವೆ. ಅವು ದಂತದ ಕೆಲಸಗಾರರು ನಿರ್ಮಿಸುವ ದೇವತಾಮೂರ್ತಿಗಳ ಪ್ರತ್ಯೇಕ ಸಂಪುಟಗಳನ್ನು ಕಲ್ಲಿನಲ್ಲಿ ದೊಡ್ಡ ಆಕಾರದಲ್ಲಿ ಪುನರಾವರ್ತನೆ ಮಾಡಿದಂತೆ ಭಾಸವಾಗುತ್ತದೆ. ಗೋಡೆಗಳ ಮೇಲೆ ಅಲಂಕರಣಕ್ಕಾಗಿ ಕೆತ್ತಿದ ಜೋತಾಡುತ್ತಿರುವ ಸರಪಳಿಗಳು, ಸೂರುಗಳ ತಳಭಾಗದಲ್ಲಿ ತಿರುಪುಮೊಳೆ-ತಿರುಪುಗಟ್ಟಿಗಳನ್ನು ಹೋಲುವ ಕೆತ್ತನೆಗಳು ಇವೆಲ್ಲ ಲೋಹಗಾರಿಕೆಯ ಕೆಲಸವನ್ನು ಹೋಲುತ್ತವೆ. ಪ್ರತಿಮೆಗಳ ದೇಹದ ಅಡಿಯಿಂದ ಮುಡಿಯ ವರೆಗೂ ತೋರಿಸಿರುವ ಆಭರಣಗಳ ವೈವಿಧ್ಯ, ನಯಗಾರಿಕೆ ಚಿನ್ನದ ಕುಸುರಿ ಕೆಲಸವನ್ನು ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ಕಲಾಭಿಮಾನಿದೇವಿ ಸರಸ್ವತಿಯ ನೆಚ್ಚಿನ ಪುತ್ರರಾದ ದಿವ್ಯಶಿಲ್ಪಿಗಳ ಹಾರ್ದಿಕ ನಿರ್ಮಾಣಗಳಾದ ಈ ದೇವಮಂದಿರಗಳು ಮೂರ್ತಿಶಿಲ್ಪಿಗಳ ವಾಸ್ತುನಿರ್ಮಾಣವೇ ಹೊರತು ವಾಸ್ತುಶಿಲ್ಪಿಗಳಿಂದ ನಿರ್ಮಿತವಾದ ಕಟ್ಟಡಗಳಲ್ಲ.

ಹೊಯ್ಸಳ ಶೈಲಿ ಎಂದು ಕರೆಯಬಹುದಾದ ಈ ಎಲ್ಲ ವೈಶಿಷ್ಟ್ಯಗ ಳನ್ನೂ ಉಳ್ಳ ಸು. 60 ದೇವಾಲಯಗಳು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉಳಿದು ಬಂದಿವೆ. ಇವುಗಳಲ್ಲಿ ಅತಿಪ್ರಾಚೀನವಾದುದು ಬೇಲೂರಿನ ಚೆನ್ನಕೇಶವ ದೇವಾಲಯ (1117). ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯದಲ್ಲಿ (ಸು. 1113) ಈ ಶೈಲಿಯ ಉಗಮದ ಸೂಚನೆಗಳು ಕಂಡುಬರುತ್ತವೆ. ಆದರೆ ಪೂರ್ಣ ರೂಪಣೆ ಇಲ್ಲ. ಹಳೇಬೀಡು, ಸೋಮನಾಥಪುರ, ಬಸರಾಳು, ನಾಗಮಂಗಲ, ಅರಸೀಕೆರೆ, ಹರಿಹರ, ನಂದಿತಾವರೆ, ಅರಳಗುಪ್ಪೆ, ರಾಮನಾಥಪುರ, ಮರಲೆ, ಬೆಳ್ಳೂರು, ನಾಗಲಾಪುರ, ನೊಣವಿನಕೆರೆ, ವಿಘ್ನಸಂತೆ, ನುಗ್ಗೇಹಳ್ಳಿ, ಹೊಸಹೊಳಲು, ಹಾರ್ನಹಳ್ಳಿ, ಹುಲ್ಲೇಕೆರೆ, ಜಾವಗಲ್ಲು, ಬೆಳವಾಡಿ, ತುರುವೇಕೆರೆ, ಭದ್ರಾವತಿ, ಜಿನನಾಥಪುರ ಮೊದಲಾದೆಡೆಗಳಲ್ಲಿ ಕಟ್ಟಿದ ಈ ವಿಶಿಷ್ಟ ಹೊಯ್ಸಳ ಶೈಲಿಯ ದೇವಾಲಯಗಳು ಬೆಳಕಿಗೆ ಬಂದಿವೆ. ಬೇಲೂರಿನಲ್ಲಿ ಸ್ಪಷ್ಟವಾಗಿ ರೂಪಿತವಾದ ಈ ಶೈಲಿ ಸುಮಾರು ಎರಡು ಶತಮಾನಗಳ ವರೆಗೆ ಮುಂದುವರಿಯಿತು. ತುಮಕೂರು ಜಿಲ್ಲೆಯ ವಿಘ್ನಸಂತೆಯಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯ (1286) ಪ್ರಾಯಶಃ ಈ ಶೈಲಿಯಲ್ಲಿ ರಚಿತವಾದ ಕೊನೆಯ ಕಟ್ಟಡ.

	ಹೊಯ್ಸಳ ಶೈಲಿಯ ಪೂರ್ಣ ಅಭಿವ್ಯಕ್ತಿ ಇರದೆ ಹಳೆಯ ಚಾಳುಕ್ಯ ಹಾಗೂ ದಾಕ್ಷಿಣಾತ್ಯ ಶೈಲಿಯಲ್ಲಿ ಕಟ್ಟಿದ ಹೊಯ್ಸಳರ ಕಾಲದ ಅನೇಕ ದೇವಾಲಯಗಳೂ ಬೆಳಕಿಗೆ ಬಂದಿವೆ. ಜಗತಿ, ನಕ್ಷತ್ರಾಕಾರದ ತಳವಿನ್ಯಾಸ ಮುಂತಾದವು ಇಲ್ಲದೆ ಆಯಾಕಾರದ ತಳವಿನ್ಯಾಸದೊಡನೆ ಅಲ್ಲಲ್ಲಿ ಹಿನ್‍ಸರಿತ, ಮುನ್‍ಸರಿತವಷ್ಟನ್ನೇ ಹೊಂದಿದ್ದು, ಹೆಚ್ಚಿನ ಮಟ್ಟಿಗೆ ಅರೆಗಂಬಗಳು ಹಾಗೂ ಕುಡ್ಯ ಅಲಂಕರಣದ ಭಿತ್ತಿಗಳಿರುವ ದೇವಾಲಯಗಳು ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಿಶೇಷವಾಗಿಯೂ ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಪರೂಪವಾಗಿಯೂ ಕಾಣಬರುತ್ತವೆ. ಇವುಗಳಲ್ಲೂ ಹೆಚ್ಚಿನವು ಬಳಪದ ಕಲ್ಲಿನಲ್ಲೇ ರಚಿತವಾಗಿದ್ದರೂ ಹೊಯ್ಸಳ ಶೈಲಿಯ ಶಿಲಾ ಅಲಂಕರಣ, ಶಿಲ್ಪಸಂಪತ್ತು ಇವುಗಳಲ್ಲಿ ಇರುವುದಿಲ್ಲ. ಆದರೆ ಕೆಲವು ದೇವಾಲಯಗಳಲ್ಲಿ ಹೊಯ್ಸಳ ಶೈಲಿಯ ಒಂದೆರಡು ಅಂಶಗಳು ಅಲ್ಲಲ್ಲಿ ಕಾಣಿಸಿಕೊಳ್ಳುವುದು ಅಪರೂಪವೇನಲ್ಲ. ಈ ಹೊಯ್ಸಳ-ಚಾಳುಕ್ಯ ಮಿಶ್ರ ಶೈಲಿಗೆ ಆನೆಕೊಂಡ, ಅಗ್ರಹಾರ ಬೆಳಗುಲಿ, ಅಘಲಯ, ಶಾಂತಿಗ್ರಾಮ, ಗೋವಿಂದನಹಳ್ಳಿ, ಅಮೃತಾಪುರದ ದೇವಾಲಯಗಳು ಹಾಗೂ ಹಳೇಬೀಡಿನ ಪಾಶ್ರ್ವನಾಥ ಬಸದಿ, ಬೆಳಗಾಮಿಯ ಕೇದಾರೇಶ್ವರ ದೇವಾಲಯ ಮೊದಲಾದವುಗಳನ್ನು ಉದಾಹರಿಸಬಹುದು.

	ಹಿಂದೆ ಚೋಳರಾಜ್ಯದ ಒಳಗಿದ್ದು ಅನಂತರ ಹೊಯ್ಸಳರ ವಶಕ್ಕೆ ಬಂದ ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳ ಭಾಗಗಳಲ್ಲಿ ಹಳೆಯ ದ್ರಾವಿಡ ಸಂಪ್ರದಾಯದ ಮುಂದುವರಿಕೆಯೂ ಕಂಡುಬರುತ್ತವೆ. ಇವುಗಳಲ್ಲಿ ಗ್ರಾನೈಟ್ ಕಲ್ಲಿನಲ್ಲಿ ಕಟ್ಟಿದಂಥ ದೇವಾಲಯಗಳೂ ಅನೇಕವಿವೆ. ಜಗತಿಯಾಗಲೀ ಭಿತ್ತಿಯ ಮೇಲೆ ವಿಶಿಷ್ಟ ಶಿಲ್ಪಾಲಂಕರಣ ವಾಗಲೀ ಇವುಗಳಲ್ಲಿ ಇರುವುದಿಲ್ಲ. ತಲಕಾಡಿನ ಕೀರ್ತಿನಾರಾಯಣ, ಬೆಳಗೊಳದ ಜನಾರ್ದನ, ಕಂಬದಹಳ್ಳಿಯ ಒಂದೆರಡು ಬಸದಿಗಳು, ಶ್ರವಣಬೆಳಗೊಳದ ಬೆಟ್ಟಗಳ ಮೇಲಿರುವ ಹಲವು ಬಸದಿಗಳು, ರಾಘವಾಪುರ, ಮಾರೆಹಳ್ಳಿ ಮೊದಲಾದೆಡೆಯ ದೇವಾಲಯಗಳು ದ್ರಾವಿಡ ಸಂಪ್ರದಾಯದಲ್ಲಿ ಕಟ್ಟಿದ ಹೊಯ್ಸಳರ ಕಾಲದ ದೇವಾಲಯಗಳು.

ಒಟ್ಟಿನಲ್ಲಿ ಹೊಯ್ಸಳ ಸಾಮ್ರಾಜ್ಯದ ಸುಮಾರು ಎರಡೂವರೆ ಶತಮಾನದ ಅಸ್ತಿತ್ವದ ಅವಧಿಯಲ್ಲಿ ಕಟ್ಟಿದ 150ಕ್ಕೂ ಹೆಚ್ಚಿನ ದೇವಾಲಯಗಳು ಈಗ ಉಳಿದಿರುವುವಲ್ಲದೆ ಇನ್ನೂ ಅನೇಕ ದೇವಾಲಯ ಗಳು ಆ ಕಾಲದಲ್ಲಿ ಕಟ್ಟಲಾಗಿದ್ದುವು ಎಂಬುದಕ್ಕೆ ಶಾಸನಾಧಾರಗಳು ದೊರಕುತ್ತವೆ. ಈ ಅಸಂಖ್ಯಾತ ದೇಗುಲಗಳ ಸೃಷ್ಟಿಗೆ ಆ ಕಾಲದಲ್ಲಿದ್ದ ಶಾಂತ, ಸಮೃದ್ಧ ಸ್ಥಿತಿ ಮತ್ತು ಧರ್ಮಶ್ರದ್ಧೆ ಮುಖ್ಯಕಾರಣ. ರಾಜರುಗಳೇ ಅಲ್ಲದೆ, ರಾಜವಂಶದ ಇತರರು, ಸಾಮಂತರು, ವಣಿಕರು, ವಣಿಕಾ ಸಂಘಗಳು, ವೃತ್ತಿಸಂಘಗಳು ಹಾಗೂ ಸಾಮಾನ್ಯರು ದೇವಾಲಯಗಳನ್ನು ಕಟ್ಟಿಸಿರುವರಲ್ಲದೆ, ಅವುಗಳ ಜೀರ್ಣೋದ್ಧಾರ ಮತ್ತು ಪೂಜಾದಿಗಳಿಗೂ ದತ್ತಿಗಳನ್ನು ನೀಡಿದ್ದಾರೆ. ಹೊಯ್ಸಳ ದೇವಾಲಯಗಳಲ್ಲಿ ಹೆಚ್ಚಿನವು ಶೈವ ಮತ್ತು ವೈಷ್ಣವ ಪಂಥಕ್ಕೆ ಸೇರಿದವು. ಇವಲ್ಲದೆ ಹಲವಾರು ಜೈನಬಸದಿಗಳೂ ಈ ಕಾಲದಲ್ಲಿ ಹುಟ್ಟಿದುವು.

	ಹೊಯ್ಸಳರ ಕಾಲದ ಶಿಲ್ಪಗಳು ವಾಸ್ತುಕೃತಿಗಳಿಗೆ ಹೊಂದಿಕೊಂಡಂತೆ ಅವುಗಳ ಅಲಂಕರಣಾರ್ಥವಾಗಿಯೇ ಮಾಡಿದವುಗಳಾಗಿವೆ. ದೇವಾಲಯದ ಬಹುತೇಕ ಭಾಗಗಳನ್ನು ಶಿಲ್ಪಗಳಿಂದ ತುಂಬುವ ಈ ಕಾಲದ ವೈಶಿಷ್ಟ್ಯ ದಿಂದಾಗಿ ಹೆಚ್ಚಿನವು ಉಬ್ಬುಶಿಲ್ಪಗಳೂ ಧಾರ್ಮಿಕ ರೀತಿಯವೂ ಆಗಿರುತ್ತವೆ. ಹೊರಭಿತ್ತಿಗಳಲ್ಲಿರುವ ದೇವಶಿಲ್ಪಗಳು ಸಾಮಾನ್ಯವಾಗಿ ಪುರಾಣಗಳಲ್ಲಿ ಉಕ್ತವಾಗಿರುವ ಶೈವ ಅಥವಾ ವೈಷ್ಣವ ಮೂರ್ತಿಗಳು ಅಥವಾ ಹಲವು ಕಥೆಗಳ ನಿರೂಪಣೆಗಳು. ಅಪರೂಪವಾಗಿ ಪಂಚತಂತ್ರ ಮುಂತಾದೆಡೆಗಳಿಂದ ಆಯ್ದ ಕಥೆಗಳನ್ನೂ ಶಿಲ್ಪಿಸುವುದುಂಟು. ಹಿಂದು ದೇವಾಲಯಗಳಲ್ಲಿ ದೇವಶಿಲ್ಪಗಳ ಅಳವಡಿಕೆ ಹೆಚ್ಚು. ಆದರೆ ಜೈನದೇವಾಲಯಗಳಲ್ಲಿ ಅದು ಅಷ್ಟಾಗಿ ಕಾಣುವುದಿಲ್ಲ. ಗರ್ಭಗುಡಿಯಲ್ಲಿ ಸ್ಥಾಪಿತವಾಗುವ ಮೂರ್ತಿಗಳು ಪೂರ್ಣಶಿಲ್ಪಗಳಾದರೂ ಪ್ರಭಾವಳಿಯ ಹಿನ್ನೆಲೆಯನ್ನು ಒದಗಿಸಿ ಇವನ್ನೂ ಹೆಚ್ಚುಕಡಿಮೆ ಉಬ್ಬುಶಿಲ್ಪಗಳಂತೆಯೇ ರೂಪಿಸುವುದು ರೂಢಿ. ಹೊಯ್ಸಳ ಕಾಲದ ಶಿಲ್ಪಗಳಲ್ಲಿ ಕಂಡುಬರುವ ಒಂದು ಮುಖ್ಯ ಅಂಶ ಅಲಂಕರಣಕ್ಕೆ ಹೆಚ್ಚಿನ ಗಮನ. ಶಿಲ್ಪಗಳಲ್ಲಿ ಆಭರಣಗಳು, ಉಡುಗೆಗಳು ಇತ್ಯಾದಿಗಳನ್ನು ಬಹು ನವುರಾಗಿ, ವಿವರವಾಗಿ, ಅಳವಡಿಸುವ ಪ್ರವೃತ್ತಿಯಿಂದಾಗಿ ಶಿಲ್ಪಗಳ ಅಂಗಾಂಗ ನಿರೂಪಣೆಯಲ್ಲಿ ಸಹಜತೆಯಾಗಲೀ ವಿವಿಧ ಭಾವ ಪ್ರಕಟಣೆಯಾಗಲೀ ಕಂಡುಬರುವುದಿಲ್ಲ. ಇವುಗಳನ್ನು ಕಲಾಸಿದ್ಧಿಗಳೆನ್ನುವುದಕ್ಕಿಂತಲೂ ಉತ್ತಮ ಕಸಬುದಾರರ ನಿರೂಪಣೆಗಳೆನ್ನಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಮಾತುಗಳು ವಿಶೇಷವಾಗಿ ದೇವ, ಮಾನವ ಶಿಲ್ಪಗಳಿಗೇ ಅನ್ವಯಿಸುತ್ತವೆ. ಹೊಯ್ಸಳ ಶಿಲ್ಪಿಗಳು ರಚಿಸಿರುವ ಪ್ರಾಣಿ, ಲತೆ ಮುಂತಾದ ಶಿಲ್ಪಗಳಾದರೋ ಬಹು ಸ್ವಾಭಾವಿಕವಾಗಿ, ಸಮಂಜಸವಾಗಿ ಹಲವು ಬಾರಿ ಶಕ್ತಿಯುತವಾಗಿ ನಿರೂಪಿತವಾಗಿರುತ್ತವೆ. ಹೊಯ್ಸಳ ಶಿಲ್ಪಸೃಷ್ಟಿಯ ಮೋಡಿ ಬೆರಗುಗೊಳಿಸುವಂಥದು. ಒಂದೊಂದೇ ಶಿಲ್ಪಗಳಲ್ಲಿರುವ ಕುಸುರಿಕೆಲಸ, ವೈವಿಧ್ಯಮಯ ವಿನ್ಯಾಸಗಳು ಹಾಗೂ ಒಟ್ಟಾಗಿ ದೇವಾಲಯಗಳ ಮೇಲೆ ವ್ಯವಸ್ಥಿತ ರೀತಿಯಲ್ಲಿ ಜೋಡಣೆಗೊಂಡಾಗ ಅವು ನೋಡುಗನ ಮೇಲೆ ಉಂಟುಮಾಡುವ ಪ್ರಭಾವ ಮರೆಯಲಾಗದ ಅನುಭವವಾಗುತ್ತದೆ.

	ಕಲಾನಿರ್ಮಾಣಗಳಲ್ಲಿ ಅಮೋಘವೂ ಬಹಳ ಸುಂದರವೂ ಆದ ಶಿಲಾಬಾಲಿಕೆಯರೆಂಬ ಅಭಿಧಾನದಿಂದ ಪ್ರಪಂಚಪ್ರಸಿದ್ಧವಾದ, ಕಲಾಇತಿಹಾಸಕಾರರಿಂದ ಅನುಪಮ ಕೃತಿಗಳೆಂದು ಹೊಗಳಿಸಿಕೊಂಡ ಸಾಲಭಂಜಿಕೆ ಅಥವಾ ಮದನಿಕೆಯರ ವಿಗ್ರಹಗಳು ಯಾವುದೇ ಕಾಲದ, ಯಾವುದೇ ದೇಶದ ಶಿಲ್ಪಗಳ ಜೊತೆಯಲ್ಲಿಟ್ಟರೂ ಸ್ವಂತಿಕೆಯನ್ನೂ ಅಮರತ್ವವನ್ನೂ ಸಂಪಾದಿಸಿಕೊಳ್ಳಬಲ್ಲವು. ಕಂಬಗಳ ಅಗ್ರಭಾಗದಲ್ಲಿ ಬೋದಿಗೆ ಮತ್ತು ಚಾವಣಿಗಳ ನಡುವೆ ಅಡ್ಡದೂಲಗಳಿಗೆ ಆಧಾರವಾಗಿರು ವಂತೆ ಮುಂಬಾಗಿ ನಿಲ್ಲುವಂತೆ ಜೋಡಿಸಿರುವ ಈ ಮೂರ್ತಿಗಳ ನಿರೂಪಣೆಯಲ್ಲಿ ಕೇವಲ ಕೆತ್ತನೆಯ ಚಾತುರ್ಯ ಮಾತ್ರವಲ್ಲ, ಭೂಮಟ್ಟದಿಂದ 10-15 ಅಡಿಗಳೆತ್ತರದಲ್ಲಿ ಸು. 30º ಕೋನದಲ್ಲಿ ಮುಂಬಾಗಿನಿಂತ ಪ್ರತಿಮೆಗಳು ಕೆಳಗೆ ನಿಂತ ನೋಟಕರ ದೃಷ್ಟಿಕೋನಗ ಳಿಂದ ತಮ್ಮ ಅಂಗಾಂಗಗಳ ಪ್ರಮಾಣವನ್ನು ನೈಜವಾಗಿ ಕಾಣುವಂತೆ ಪ್ರದರ್ಶಿಸುತ್ತಿರುವ ಹಾಗೆ ಶಿಲ್ಪಿ ಅವನ್ನು ರೂಪಿಸಿದ್ದಾನೆ. ಅನೇಕ ರೀತಿಯ ಆಭರಣಗಳನ್ನು ದೇಹಾದ್ಯಂತ ಧರಿಸಿಕೊಂಡು ಅರೆಬೆತ್ತಲೆಯಾದ ಈ ಸ್ತ್ರೀವಿಗ್ರಹಗಳಲ್ಲಿ ಆಭರಣಗಳ ಹಿಂದಿನಿಂದ ಯೌವನಭರಿತ ಪ್ರೌಢತರುಣಿಯರ ಸೌಂದರ್ಯದ ಹೊನಲು ಹೊರನುಗ್ಗಿ ಹರಿಯುತ್ತಿರು ವಂತೆ ಕಾಣುತ್ತದೆ. ಸುಮಾರು ನೂರು ಸಂಖ್ಯೆಯ ಹೊಯ್ಸಳ ದೇವಾಲಯಗಳ ಪೈಕಿ ಕೇವಲ 8-10 ಗುಡಿಗಳಲ್ಲಿ ಮಾತ್ರ ಈ ಮದನಿಕೆಯರನ್ನು ಕಡೆದಿದ್ದಂತೆ ಕಾಣಬರುತ್ತದೆ. ಬಳ್ಳಿಗಾಮೆಯ ತ್ರಿಪುರಾಂತಕೇಶ್ವರ, ನಾಗಲಾಪುರದ ಚೆನ್ನಕೇಶವ ಮಂದಿರಗಳಲ್ಲಿ ಮೊದಲಿಗೆ ಮದನಿಕಾ ವಿಗ್ರಹಗಳಿದ್ದರೂ ಈಗ ಕಣ್ಮರೆಯಾಗಿವೆ. ಉಂಡಿಗನಹಾಳದ ಚಾಮುಂಡೇಶ್ವರಿ, ಮರಲೆಯ ಕೇಶವ, ಹಳೇಬೀಡಿನ ಹೊಯ್ಸಳೇಶ್ವರ, ಕಿಕ್ಕೇರಿಯ ಬ್ರಹ್ಮೇಶ್ವರ ಮಂದಿರಗಳಲ್ಲಿ ಕೆಲವು ವಿಗ್ರಹಗಳು ಇನ್ನೂ ಉಳಿದುಬಂದಿವೆ. ಆದರೆ ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಮೊದಲು ಇದ್ದಿರಬಹುದಾದ 44ರಲ್ಲಿ 42 ಅಪೂರ್ವ ಸೌಂದರ್ಯನಿಧಿಗಳಾದ ಶಿಲಾಬಾಲಿಕೆಯರು ಇನ್ನೂ ಉಳಿದು ಬಂದಿರುವುದು ಮಹತ್ತ್ವದ ಸಂಗತಿ.

	ಮದನಿಕಾವಿಗ್ರಹಗಳು ಸಾಮಾನ್ಯವಾಗಿ ಸ್ತ್ರೀವಿಗ್ರಹಗಳು. ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಒಬ್ಬ ವೇಣುಲೋಲ ಮತ್ತು ಇಬ್ಬರು ಮೃದಂಗ ವಾದಕರ ವಿಗ್ರಹಗಳು ಮಾತ್ರ ಪುರುಷರಂತೆ ಕಂಡುಬಂದರೂ ಅವು ಸಹ ಪುರುಷವೇಷಧಾರಿ ಸ್ತ್ರೀಮೂರ್ತಿಗಳೇ ಇರಬೇಕೆಂದೆನಿಸುತ್ತದೆ. ನವರಂಗದ ಕಂಬದ ಮೇಲಿನ ಒಂದು ಮೂರ್ತಿ ಕಿರೀಟ ಧರಿಸಿದ್ದರೂ ಹೊರವಲಯದ ಮೂರ್ತಿಗಳಲ್ಲಿ ವೇಣುಗಾಯಕ ಕೃಷ್ಣನಿರಬಹುದೆಂದು ಸೂಚಿಸಲಾಗಿದ್ದರೂ ಕಪಾಲಪಂಕ್ತಿ ಭೂಷಿತವಾದ ಕಿರೀಟ ಧರಿಸಿ ಎಡಗೈಯಲ್ಲಿ ಕಪಾಲದಂಡ ಹಿಡಿದ ಮೂರ್ತಿಯನ್ನು ಭೈರವಿಯೆಂದು ಗುರುತಿಸಿದ್ದರೂ ವೀಣಾಪುಸ್ತಕಪಾಣಿಯನ್ನು ವಿದ್ಯಾಕಲಾಭೂಮಿಯ ಸರಸ್ವತಿಯಿರಬಹುದೆಂದುಊಹಿಸಿದ್ದರೂ ಎಲ್ಲ ವಿಗ್ರಹಗಳು ಕೆಲಬಾರಿ ದೇವತಾರೂಪ ಧರಿಸಿರುವ ನೃತ್ಯಸಂಗೀತಮಗ್ನರಾದ ಮಾನಿನಿಯರೆಂಬುದು ವಿದ್ವಾಂಸರ ಅಭಿಪ್ರಾಯ. ಶಿಲ್ಪಿ ತನ್ನ ವಾಸ್ತುಕಾರ್ಯದಲ್ಲಿ ಕಂಬಗಳ ಭಾಗವಾಗಿ ಚಾವಣಿಗೆ ಆಧಾರವೆಂಬ ನೆವದಿಂದ ಈ ಭುವನಮೋಹಕ ಸುಂದರಿಯರ ಪ್ರತಿಮೆಗಳನ್ನು ಕಡೆಯುವುದರ ಮೂಲಕ ತನ್ನ ಉನ್ನತ ಕೈಚಳಕದ ಪ್ರದರ್ಶನಕ್ಕೆ ಒಂದು ಸದವಕಾಶ ಪಡೆದುಕೊಂಡಿದ್ದಾನೆ. ಅತಿಭಂಗ-ತ್ರಿಭಂಗ ಮುದ್ರೆಗಳಲ್ಲಿ ಹಲವಿಧ ವ್ಯಾಪಾರಗಳಲ್ಲಿ ನಿರತರಾಗಿರುವ ಮದನಿಕೆಯರು, ಫಲಕಗಳ ಕೆಳಭಾಗದಲ್ಲಿ ಮದನಿಕೆಯರ ವಿವಿಧ ಚಟುವಟಿಕೆಗಳಲ್ಲಿ ಸಹಾಯ ನೀಡುತ್ತಿರುವ ಸಣ್ಣ ಪ್ರಮಾಣದಲ್ಲಿ ಕಡೆಯಲಾದ ಪರಿಚಾರಕವರ್ಗ, ಮದನಿಕೆಯರ ತಲೆಯ ಮೇಲೆ ಕಮಾನಿನಂತೆ, ಲತಾತೋರಣಗಳಂತೆ, ಅವರ ದೈವೀನಟನೆಗೆ ಪೂರಕವಾಗಿ ಪ್ರಭಾವಳಿಯಂತೆ ಕಾಣುವ ವೃಕ್ಷಶಾಖೆಗಳು-ಹೀಗೆ ಈ ಚಾಚುವಿಗ್ರಹ ಫಲಕಗಳ ಭಾಗಗಳನ್ನು ವಿಶ್ಲೇಷಿಸಬಹುದಾಗಿದೆ.

ಈ ವಿಗ್ರಹಗಳ ಭಾವಗಳನ್ನು ವಿಶ್ಲೇಷಿಸುವಾಗ ನವರಸಗಳ ನಿರೂಪಣೆಯನ್ನು ಅವುಗಳಲ್ಲಿ ಕಂಡವರಿದ್ದಾರೆ. ಒಂದೊಂದು ಫಲಕದಲ್ಲೂ ಒಂದಕ್ಕಿಂತ ಹೆಚ್ಚು ರಸಗಳ ನಿರೂಪಣೆ ಕಂಡುಬಂದರೂ ಶೃಂಗಾರರಸ ಪ್ರಧಾನವಾಗಿರುತ್ತದೆ. ಸನ್ನಿವೇಶ, ವಿಶಿಷ್ಟಭಾವನಿರೂಪಣೆಗೆ ಹೊಂದುವಂತೆ ಶಿಲ್ಪಿಗಳು ವಿಗ್ರಹಗಳನ್ನು ಮುಮ್ಮುಖವಾಗಿಯೋ ಪಾಶ್ರ್ವನೋಟಕವಾ ಗಿಯೋ ದೇಹದ ಕೆಳಭಾಗ ಮುಮ್ಮುಖವಾಗಿಯೂ ಮೇಲ್ಭಾಗ ಪಾಶ್ರ್ವನೋಟಕವಾಗಿಯೂ ತೋರಿಸಿರುವುದರಿಂದ ಪ್ರತಿಮೆಗಳು ನೈಸರ್ಗಿಕವಾಗಿವೆ ಮತ್ತು ದೇವತಾಮೂರ್ತಿ ನಿರೂಪಣೆಯಲ್ಲಿರುವ ಪೆಡಸು ಕಂಡು ಬರುವುದಿಲ್ಲ.	(ಬಿ.ಕೆ.ಜಿ.)

ಸಾಹಿತ್ಯ ಮತ್ತು ಲಲಿತಕಲೆ : ಸಾಮಾಜಿಕ ನೆಮ್ಮದಿ ನೆಲೆಯೂರಿದ್ದ ಹೊಯ್ಸಳ ಯುಗ ಸಾಹಿತ್ಯ, ಕಲೆ ಇವುಗಳ ಸಂವರ್ಧನೆಯ ಕಾಲ. ಹೊಯ್ಸಳ ಅರಸರು ಬೇರೆ ಸಂತತಿಯ ಕೆಲವು ರಾಜರು ಹೇಳಿಕೊಂಡಿರು ವಂತೆ ತಾವೇ ಗ್ರಂಥರಚನೆಗೆ ಕೈಹಾಕದಿದ್ದರೂ ಕವಿಗಳಿಗೂ ದಾರ್ಶನಿಕರಿಗೂ ವಿಶೇಷ ಪ್ರೋತ್ಸಾಹ ನೀಡಿದರು. ಇವರ ಕಾಲದಲ್ಲಿ ಧರ್ಮ, ದರ್ಶನ, ಪುರಾಣ, ಗಣಿತ, ವೈದ್ಯ, ವ್ಯಾಕರಣ ಮೊದಲಾದ ಶಾಸ್ತ್ರಗಂಥಗಳಲ್ಲದೆ ಹಲವು ಕಾವ್ಯಗಳೂ ಚಂಪೂ, ರಗಳೆ, ಷಟ್ಟದಿ, ನಾಟಕ, ದ್ವಿಪದಿ, ವಚನ ಮೊದಲಾದ ಪ್ರಕಾರಗಳಲ್ಲಿ ಸಂಸ್ಕøತ, ಪ್ರಾಕೃತ, ಕನ್ನಡ ಭಾಷೆಗಳಲ್ಲಿ ರಚಿತವಾದವು. ಹೊಯ್ಸಳರ ಕಾಲದಲ್ಲಿ ರಚಿತವಾದ ಕನ್ನಡ ಮತ್ತು ಸಂಸ್ಕøತ ಸಾಹಿತ್ಯ ಗ್ರಂಥಗಳು ತತ್ಕಾಲೀನ ಸಾಮಾಜಿಕ ಸ್ಥಿತಿಗತಿಗಳು, ನಂಬಿಕೆ ಮತ್ತು ನಡೆವಳಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುತ್ತವೆ.

	ರಾಮಚಂದ್ರಚರಿತ ಪುರಾಣದ (ಪಂಪರಾಮಾಯಣ) ಕರ್ತೃವಾದ ನಾಗಚಂದ್ರ ಹೊಯ್ಸಳ ಅರಸ ಒಂದನೆಯ ಬಲ್ಲಾಳ ಅಥವಾ ವಿಷ್ಣುವರ್ಧನನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ಈತ ಕಲ್ಯಾಣ ಚಾಳುಕ್ಯ ಇಮ್ಮಡಿ ಸೋಮೇಶ್ವರನ ಆಸ್ಥಾನದಲ್ಲಿದ್ದಿರಬೇಕೆಂದೂ ಒಂದು ಅಭಿಪ್ರಾಯ ಇದೆ. ನಾಗಚಂದ್ರನಿಗೆ ಅಭಿನವಪಂಪನೆಂಬ ಹೆಸರಿದೆ. ಕಂತಿಯೆಂಬ ಕವಯಿತ್ರಿಯೊಬ್ಬಳಿದ್ದಳೆಂದೂ ಅವಳು ನಾಗಚಂದ್ರನ ಸಮಕಾಲೀನಳಾಗಿದ್ದಿರಬೇಕೆಂದೂ ಪ್ರತೀತಿ ಇದೆ. ಹರಿಹರ ಮತ್ತು ರಾಘವಾಂಕ ಕವಿಗಳು ಒಂದನೆಯ ನರಸಿಂಹನ (1142-73) ಸಮಕಾಲೀನರಾಗಿದ್ದಿರಬೇಕೆಂದು ಊಹೆ.

	ಇಮ್ಮಡಿ ವೀರಬಲ್ಲಾಳನ ಕಾಲದ ಸುಪ್ರಸಿದ್ಧ ಕವಿಗಳು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಯಶೋಧರಚರಿತೆ ಮತ್ತು ಅನಂತನಾಥಪುರಾಣ ಎಂಬ ಪ್ರಸಿದ್ಧ ಗ್ರಂಥಗಳನ್ನು ರಚಿಸಿದ ಜನ್ನ ಇವನ ಆಸ್ಥಾನಕವಿ. ವೀರಬಲ್ಲಾಳ ಇವನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನು ನೀಡಿ ಗೌರವಿಸಿದ. ಇವನ ಕಾಲದಲ್ಲಿ ಕೆರೆಯ ಪದ್ಮರಸ ದೀಕ್ಷಾಬೋಧೆಯನ್ನೂ ನೇಮಿಚಂದ್ರ ನೇಮಿನಾಥಪುರಾಣವನ್ನೂ ಆಚಣ್ಣ ವರ್ಧಮಾನಪುರಾಣವನ್ನೂ ರಚಿಸಿದರು. ಮತ್ತೊಬ್ಬ ಪ್ರಸಿದ್ಧ ವಿದ್ವಾಂಸನೂ ಕವಿಯೂ ಆದ ರಾಜಾದಿತ್ಯ ಕ್ಷೇತ್ರಗಣಿತ, ವ್ಯವಹಾರಗಣಿತ ಮತ್ತು ಲೀಲಾವತಿ ಎಂಬ ಗ್ರಂಥಗಳನ್ನು ರಚಿಸಿದ. ಕನ್ನಡದಲ್ಲಿ ಮೊಟ್ಟಮೊದಲ ನೆಯ ಬ್ರಾಹ್ಮಣ ಕವಿಯೆಂದು ಪ್ರಖ್ಯಾತನಾಗಿರುವ ಜಗನ್ನಾಥವಿಜಯ ಕಾವ್ಯದ ಕರ್ತೃ ರುದ್ರಭಟ್ಟನ ಪೋಷಕ ವೀರಬಲ್ಲಾಳನ ಸಚಿವ ಚಂದ್ರಮೌಳಿ. ಕಬ್ಬಿಗರಕಾವ ಗ್ರಂಥದ ಕರ್ತೃವಾದ ಆಂಡಯ್ಯ ಬಲ್ಲಾಳನ ಸಮಕಾಲೀನ. ಅಲ್ಲದೆ ವೀರಬಲ್ಲಾಳನ ಸಚಿವರಾದ ಬೂಚಿರಾಜ ಮತ್ತು ಚಂದ್ರಮೌಳಿ ಇವರು ಕನ್ನಡ ಮತ್ತು ಸಂಸ್ಕøತ ಭಾಷೆಗಳೆರಡರಲ್ಲೂ ಗದ್ಯಪದ್ಯಗಳನ್ನು ರಚಿಸಿದರೆಂದು ತಿಳಿದುಬರುತ್ತದೆ. ಅರಸೀಕೆರೆ ತಾಲ್ಲೂಕಿನ ಅನೇಕ ಶಾಸನಗಳನ್ನು ಉತ್ಕøಷ್ಟ ಭಾಷೆಯಲ್ಲಿ ರಚಿಸಿರುವ ತ್ರಿವಿಕ್ರಮಪಂಡಿತ ಉದ್ದಾಮ ಕವಿಯಾಗಿದ್ದನೆಂದು ತಿಳಿಯುತ್ತದೆ. ಆದರೆ ಇವನು ರಚಿಸಿದ ಗ್ರಂಥಗಳು ಇದುವರೆಗೂ ದೊರೆತಿಲ್ಲ. ನರಸಿಂಹನ ಅಮಾತ್ಯ ಪೋಲಾಳ್ವದಂಡನಾಯಕ ಹರಿಚರಿತ ಎಂಬ ಗ್ರಂಥವನ್ನು ರಚಿಸಿದ. ಸೋಮನಾಥ ಮತ್ತು ಚಿದಾನಂದರು ಈ ಕಾಲದ ಇತರ ಮುಖ್ಯರು. ಜನ್ನನ ಸಹೋದರಿಯ ಗಂಡನಾದ ಮಲ್ಲಿಕಾರ್ಜುನ ಸೂಕ್ತಿಸುಧಾರ್ಣವ ಎಂಬ ಗ್ರಂಥವನ್ನು ರಚಿಸಿದ. ಮಲ್ಲಿಕಾರ್ಜುನನ ಸುತನಾದ ಕೇಶಿರಾಜ ಸುಪ್ರಸಿದ್ಧ ಶಬ್ದಮಣಿದರ್ಪಣದ ಕರ್ತೃ.

	ಹೊಯ್ಸಳರ ಕಾಲದಲ್ಲಿ ಸಂಸ್ಕøತ ಭಾಷೆಯಲ್ಲೂ ಅನೇಕ ಗ್ರಂಥಗಳು ರಚನೆಯಾದವು. ರಾಮಾನುಜಾಚಾರ್ಯ ಮತ್ತು ಅವರ ಅನುಯಾಯಿಗ ಳಿಂದ ವೈಷ್ಣವಪಂಥವನ್ನು ಪ್ರತಿಪಾದಿಸುವ ಗ್ರಂಥಗಳು ರಚಿಸಲ್ಪಟ್ಟವು. ತಲೆಮಾರುಗಳ ಪರ್ಯಂತ ಹೊಯ್ಸಳ ಆಸ್ಥಾನದಲ್ಲಿದ್ದು ವಿದ್ಯಾಚಕ್ರವರ್ತಿಗ ಳೆಂದು ಪ್ರಸಿದ್ಧರಾಗಿದ್ದ ಮನೆತನದ ಕವಿಗಳನೇಕರು ಸಂಸ್ಕøತದಲ್ಲಿ ಗ್ರಂಥಗಳನ್ನು ರಚಿಸಿದರು. ಎರಡನೆಯ ವೀರಬಲ್ಲಾಳನ ಸಮಕಾಲೀನ ನಾಗಿದ್ದ ಒಂದನೆಯ ವಿದ್ಯಾಚಕ್ರವರ್ತಿ ಅನೇಕ ಶಾಸನಗಳನ್ನು ರಚಿಸಿದ್ದಾನೆ. ಒಂದನೆಯ ವಿದ್ಯಾಚಕ್ರವರ್ತಿಯ ಮಗನಾದ ವೈದ್ಯನಾಥ ಎರಡನೆಯ ನರಸಿಂಹನ ಆಸ್ಥಾನದಲ್ಲಿದ್ದ. ವೈದ್ಯನಾಥನ ಮಗನಾದ ಎರಡನೆಯ ವಿದ್ಯಾಚಕ್ರವರ್ತಿ ಎರಡನೆಯ ನರಸಿಂಹನ ಮತ್ತು ಸೋಮೇಶ್ವರನ ಸಮಕಾಲೀನನಾಗಿದ್ದು ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ರಚಿಸಿದ. ಎರಡನೆಯ ವಿದ್ಯಾಚಕ್ರವರ್ತಿಯ ಮೊಮ್ಮಗನಾದ ಮೂರನೆಯ ವಿದ್ಯಾಚಕ್ರವರ್ತಿ ರುಕ್ಮಿಣಿ ಕಲ್ಯಾಣ ಎಂಬ ಕಾವ್ಯವನ್ನು ರಚಿಸಿದ.

	ಸಾಹಿತ್ಯರಂಗದಲ್ಲಿ ಹೊಯ್ಸಳರ ಕಾಲ ವೈಭವಯುತವಾಗಿದ್ದಂತೆ ಚಿತ್ರಕಲೆ, ಸಂಗೀತ ಮತ್ತು ನೃತ್ಯಗಳಲ್ಲೂ ಅವರ ಕಾಲದ ಸಂಸ್ಕøತಿ ಅಭಿವ್ಯಕ್ತವಾಗಿದೆ. ಲಲಿತಕಲೆಗೆ ಸಂಬಂಧಿಸಿದಂತೆ ಹೊಯ್ಸಳರ ಕಾಲದ ಹೆಚ್ಚು ಮಾಹಿತಿ ದೊರೆಯುವುದಿಲ್ಲ. ಶಿಲ್ಪಕಲೆ ಮತ್ತು ಶಾಸನಗಳಿಂದ ದೊರೆಯುವ ಆಧಾರಗಳು ಹೊಯ್ಸಳರ ಕಾಲದ ಲಲಿತಕಲೆಯ ಬೆಳೆವಣಿಗೆಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಸುಂದರ ದೇವಮಂದಿರಗಳು ವಿವಿಧ ಭಂಗಿಯ ನೃತ್ಯ ಮತ್ತು ಸೂಕ್ಷ್ಮ ಕೆತ್ತನೆಯ ಶಿಲ್ಪಗಳಿಂದಲಂಕೃತವಾಗಿವೆ. ಅನೇಕ ಶಿಲ್ಪಾಕೃತಿಗಳು ವೀಣೆ, ಕೋಲು, ತಾಳ, ಮದ್ದಲೆ ಮತ್ತು ಇತರ ತಂತೀವಾದ್ಯಗಳ ಸಹಿತವಾಗಿ ಕೆತ್ತಲ್ಪಟ್ಟಿವೆ. ಹೊಯ್ಸಳರ ಕಾಲದಲ್ಲಿ ಜನರು ಸಂಗೀತ ಮತ್ತು ನೃತ್ಯದಲ್ಲಿ ಹೊಂದಿದ್ದ ಅಭಿರುಚಿಯನ್ನು ಗುರುತಿಸಿಕೊಳ್ಳಲು ಶಿಲ್ಪಕಲೆ ಹೆಚ್ಚುಮಟ್ಟಿಗೆ ಸಹಕಾರಿಯಾಗುತ್ತದೆ. ಹೊಯ್ಸಳರ ಕಾಲದ ಚಿತ್ರಕಲೆಗೆ ಸಂಬಂಧಿಸಿದಂತೆ ಹೆಚ್ಚು ಮಾಹಿತಿ ದೊರೆಯುವುದಿಲ್ಲ. ಆದರೆ ಬಣ್ಣದ ತಯಾರಿಕೆ ಮತ್ತು ಚಿತ್ರಲೇಪನದಲ್ಲಿ ನುರಿತ ಕಲಾವಿದರಿದ್ದರು. ಬಣ್ಣಬಣ್ಣದ ಬಟ್ಟೆಯ ತಯಾರಿಕೆಯನ್ನೆ ಕಸಬನ್ನಾಗಿ ಹೊಂದಿದ್ದ ಜನರು ಸಲ್ಲಿಸಬೇಕಾಗಿದ್ದ ಬಣ್ಣಿಗೆ ಎಂಬ ತೆರಿಗೆಯನ್ನು ಕುರಿತು ಹಲವು ಶಾಸನಗಳಲ್ಲಿ ಮಾಹಿತಿ ದೊರೆಯುತ್ತದೆ. ಹಲವು ದೇವಾಲಯಗಳಲ್ಲಿ ಭಿತ್ತಿಚಿತ್ರಗಳಿದ್ದುವೆಂದು ತಿಳಿದುಬರುತ್ತದೆ. ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳ ಶಿಲ್ಪಗಳು ಬಣ್ಣಗಳಿಂದ ಅಲಂಕೃತವಾಗಿದ್ದವೆಂದೂ ಈ ದೇವಾಲಯಗಳ ಬಣ್ಣದ ಮೆರುಗನ್ನು ಮಳೆ, ಗಾಳಿ, ಬಿಸಿಲುಗಳಿಂದ ರಕ್ಷಿಸಲು ಮೇಣದ ಬಟ್ಟೆಯನ್ನು ಉಪಯೋಗಿಸಲಾಗುತ್ತಿತ್ತೆಂದೂ ಹಳೇಬೀಡಿನ ಪುರಾತನ ಚರಿತೆಯಿಂದ ತಿಳಿದುಬರುತ್ತದೆ. ಅನೇಕ ಕವಿಗಳು ಚಿತ್ರಕಲೆಯಲ್ಲಿ ಪರಿಣತರಾದ ಕಲಾವಿದರ ಹೆಸರುಗಳನ್ನು ಸ್ಮರಿಸಿರುವರು. ರಾಜಧಾನಿ ಮತ್ತು ಇತರ ಮುಖ್ಯ ಪಟ್ಟಣಗಳಲ್ಲೂ ದೇವಾಲಯಗಳಲ್ಲೂ ನೃತ್ಯಕ್ಕಾಗಿಯೆ ಸಜ್ಜಾದ ಹಜಾರಗಳಿದ್ದು ಅವುಗಳ ಗೋಡೆಗಳು ಬಣ್ಣಗಳಿಂದ ಬಿಡಿಸಿದ್ದ ನೃತ್ಯಭಂಗಿಯ ಚಿತ್ರಕಲೆಗಳಿಂದ ಕೂಡಿದ್ದವೆಂದು ತಿಳಿದುಬರುತ್ತದೆ.

	ಸಂಗೀತ ಮತ್ತು ನೃತ್ಯಗಳು ಹೆಚ್ಚು ಜನಪ್ರಿಯವಾಗಿದ್ದುವು. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯದಲ್ಲಿ ಕೆತ್ತಿರುವ ನೃತ್ಯಕಲಾ ಶಿಲ್ಪಗಳು ರಸ, ರಾಗ ಮತ್ತು ವಿವಿಧ ಭಂಗಿಗಳಲ್ಲಿ ವಿರಾಜಿಸುತ್ತಿವೆ. ರಾಜಾಸ್ಥಾನಗಳು ಮತ್ತು ದೇವಾಲಯಗಳಲ್ಲಿ ಸರ್ವೇಸಾಮಾನ್ಯವಾಗಿ ನೃತ್ಯಕಲೆಯ ಏರ್ಪಾಟಿರುತ್ತಿತ್ತು. ಸಂಗೀತ ಮತ್ತು ನೃತ್ಯ ಧಾರ್ಮಿಕ ಜೀವನ ಮತ್ತು ಭಕ್ತಿಭಾವದ ಅಂಗವಾಗಿದ್ದುದರಿಂದ ಮುಖ್ಯ ದೇವಾಲಯಗಳಲ್ಲಿ ನರ್ತನಕ್ಕೆ ವ್ಯವಸ್ಥೆ ಮಾಡಿ ನರ್ತಕಿಯರ ಜೀವನಕ್ಕಾಗಿ ಭೂಮಿಯನ್ನು ಸರ್ವಮಾನ್ಯವಾಗಿ ನೀಡಲಾಗುತ್ತಿತ್ತು. ಮುಖ್ಯ ಪಟ್ಟಣಗಳಲ್ಲಿ ನೃತ್ಯಕ್ಕೇ ಮೀಸಲಾದ ದೊಡ್ಡಕಟ್ಟಡಗಳೂ ಇದ್ದವು. ಇಮ್ಮಡಿ ವೀರಬಲ್ಲಾಳನ ಕಾಲದಲ್ಲಿ ಪಟ್ಟಣಶೆಟ್ಟಿಯಾಗಿದ್ದ ನಾಗದೇವ ಎಂಬುವನು ಶ್ರವಣಬೆಳಗೊಳದಲ್ಲಿ ದೊಡ್ಡ ನೃತ್ಯಕಲಾಮಂದಿ ರವನ್ನು ಕಟ್ಟಿಸಿದನೆಂದು ಒಂದು ಶಾಸನದಿಂದ ತಿಳಿದುಬರುತ್ತದೆ.

	ಹೊಯ್ಸಳ ರಾಜರು ಸಂಗೀತ ಮತ್ತು ನೃತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ವಿಷ್ಣುವರ್ಧನನ ಪಟ್ಟದ ರಾಣಿಯಾದ ಶಾಂತಲೆ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಅಭಿರುಚಿ ಮತ್ತು ಪರಿಣತಿಯನ್ನು ಪಡೆದಿದ್ದಳೆಂದು ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಶಾಂತಲದೇವಿಯನ್ನು ನಾಟ್ಯ ಸರಸ್ವತಿ ಎಂದು ಸಂಬೋಧಿಸಲಾಗಿದೆ. ಇಮ್ಮಡಿ ವೀರಬಲ್ಲಾಳ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಅಭಿರುಚಿ ಹೊಂದಿದ್ದು ಕಲಾವಿದರಿಗೆ ಪ್ರೋತ್ಸಾಹ ನೀಡಿದ. ಅವನಿಗೆ ಸಂಗೀತಪ್ರಸಂಗಭಂಗಿಸಂಗಿತಚತುರಭರತ ಎಂಬ ಬಿರುದಿತ್ತು. ಬಲ್ಲಾಳನ ರಾಣಿಯರಲ್ಲೊಬ್ಬಳಾದ ಬಮ್ಮಲದೇವಿ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಪರಿಣತಿ ಪಡೆದಿದ್ದು ಗೀತವಾದ್ಯನೃತ್ಯಸೂತ್ರಧಾರೆ ಎಂಬ ಬಿರುದನ್ನು ಪಡೆದಿದ್ದಳು. ಬಲ್ಲಾಳನ ಸಚಿವರಾದ ಚಂದ್ರಮೌಳಿ, ಕೇಶಿರಾಜ, ಅಮಿತಯ್ಯ ಮೊದಲಾದವರು ಸಂಗೀತ ಮತ್ತು ನಾಟಕಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. ಸಂಗೀತ ಮತ್ತು ನೃತ್ಯಗಳಂತೆ ನಾಟಕ ಕಲೆಯಲ್ಲಿಯೂ ಜನರಿಗೆ ಅಭಿರುಚಿಯಿ ತ್ತೆಂದು ತಿಳಿದುಬರುತ್ತದೆ. ಕನ್ನಡ ನಾಡಿನಲ್ಲಿ ಇಂದಿಗೂ ಜನಜನಿತವಾ ಗಿರುವ ಕರಿಬಂಟಕಾಳಗ ಬಯಲಾಟ ಹೊಯ್ಸಳ ರಾಜನೊಬ್ಬನಿಗೆ ಸಂಬಂಧಿಸಿದುದೆಂದು ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರತಿಪಾದಿಸಿದ್ದಾರೆ. ಪ್ರಹಸನ ಮತ್ತು ಪ್ರವಚನಗಳನ್ನು ಕುರಿತಾದ ಉಲ್ಲೇಖಗಳು ಅನೇಕ ಶಾಸನಗಳಲ್ಲಿ ದೊರೆತರೂ ಪೂರ್ಣ ವಿವರಗಳು ಲಭ್ಯವಾಗಿಲ್ಲ. ಹೊಯ್ಸಳರ ಕಾಲದಲ್ಲಿ ಸಂಗೀತ ನೃತ್ಯ ನಾಟಕಗಳು ಹೆಚ್ಚು ಜನಪ್ರಿಯವಾಗಿದ್ದು ರಾಜರ ಮತ್ತು ಸಾರ್ವಜನಿಕರ ಪ್ರೋತ್ಸಾಹ ದಿಂದ ಪುರೋಭಿವೃದ್ಧಿಗೊಂಡಿದ್ದವು.	(ಜಿ.ಆರ್.ಆರ್.)

ನಾಣ್ಯಗಳು : ಹೊಯ್ಸಳರ ರಾಜ್ಯ ಸಮೃದ್ಧವಾಗಿದ್ದುದರಿಂದ ಇವರ ಆಳಿಕೆಯಲ್ಲಿ ನಾಣ್ಯಗಳ ಚಲಾವಣೆ ತಕ್ಕಷ್ಟು ಹೆಚ್ಚಾಗಿಯೆ ಇದ್ದಿರಬೇಕುಂ ದಾನ ದತ್ತಿ ಬಿಡುವಾಗ ಭೂಮಿಯ ಹುಟ್ಟುವಳಿಯನ್ನು ನಾಣ್ಯಗಳಲ್ಲಿ ಸೂಚಿಸುತ್ತಿದ್ದುದಕ್ಕೆ ಶಾಸನಗಳಲ್ಲಿ ಹೇರಳವಾದ ಸೂಚನೆಗಳಿವೆ. ದೇವಾಲಯಗಳಲ್ಲಿ ಪೂಜೆಪುರಸ್ಕಾರಗಳಿಗಾಗಿ ನಾಣ್ಯಗಳನ್ನು ದತ್ತಿಯಾಗಿ ಕೊಡುತ್ತಿದ್ದು ಅದರ ಬಡ್ಡಿಯಿಂದ ಕೈಂಕರ್ಯಗಳನ್ನು ನಡೆಸುತ್ತಿದ್ದುದನ್ನು ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳ ಗೋಡೆಗಳ ಮೇಲಿನ ಹಲವಾರು ಶಾಸನಗಳಿಂದ ತಿಳಿದುಬರುತ್ತದೆ. ಶಾಸನಗಳಲ್ಲಿ ಮುಖ್ಯವಾಗಿ ಗದ್ಯಾಣ, ಪಣ ಎಂಬ ಎರಡು ನಾಣ್ಯಗಳ ಹೆಸರು ಕಂಡುಬರುತ್ತದೆ. ಇವುಗಳಲ್ಲಿ ಗದ್ಯಾಣವೇ ದೊಡ್ಡ ನಾಣ್ಯವಾಗಿದ್ದು ಪಣ ಅದರ 1/10 ರಷ್ಟಿತ್ತೆಂಬುದು ಶಾಸನಗಳಿಂದ ಸೂಚಿತವಾಗುತ್ತದೆ. ಗದ್ಯಾಣ ಚಿನ್ನದ ನಾಣ್ಯವಾಗಿದ್ದು ಎಷ್ಟೋವೇಳೆ ಅದನ್ನು ಹೊನ್ನು ಎಂಬ ಪದದಿಂದಲೇ ವ್ಯವಹರಿಸಲಾಗಿದೆ. ಈ ಎರಡು ಹೆಸರುಗಳಲ್ಲದೆ ಶಾಸನಗಳಲ್ಲಿ ಅಡ್ಡ, ಹಾಗ, ಬೇಳೆ, ವೀಸ, ಕಾಣಿ ಎಂಬ ಪದಗಳು ನಾಣ್ಯದ ಅನೇಕ ಭಾಗಗಳನ್ನು ಸೂಚಿಸಲು ಬಂದಿವೆ. ಇವು ಅವುಗಳ ಹೆಸರೇ ಸೂಚಿಸುವಂತೆ ಪಣದ 1/2, 1/4, 1/8, 1/16, 1/64 ಎಂಬುದನ್ನು ಸೂಚಿಸುವುದಿದ್ದು ಈ ಬೇರೆ ಬೇರೆ ಪ್ರಮಾಣದ ನಾಣ್ಯಗಳು ಚಲಾವಣೆಯಲ್ಲಿದ್ದುವೇ ಎಂಬುದು ತಿಳಿದುಬಂದಿಲ್ಲ.

	ಈಗ ಖಚಿತವಾಗಿ ಹೊಯ್ಸಳರ ಕಾಲದ್ದೆಂದು ಹೇಳಬಹುದಾದ ನಾಣ್ಯಗಳು ಉಳಿದು ಬಂದಿರುವುದು ತೀರ ಕಡಿಮೆ. ಇವುಗಳ ಪರಿಶೀಲನೆಯಿಂದ ಒಂದು ವಿಶೇಷ ಸಂಗತಿ ವ್ಯಕ್ತವಾಗುತ್ತದೆ. ಚಾಳುಕ್ಯರ ಸಾಮಂತರಾಗಿ ಅನಂತರ ಸ್ವತಂತ್ರರಾಗಿ ಹೊಯ್ಸಳರು ರಾಜ್ಯವಾಳಲು ಉಪಕ್ರಮಿಸಿದರೂ ನಾಣ್ಯಪದ್ಧತಿಯಲ್ಲಿ ಅವರನ್ನು ಅನುಸರಿಸಿದಂತೆ ತೋರುವುದಿಲ್ಲ. ಚಾಳುಕ್ಯರ ನಾಣ್ಯಗಳು 58 ಗ್ರೈನ್ ತೂಕವಿದ್ದರೆ ಹೊಯ್ಸಳರ ನಾಣ್ಯಗಳು 63 ಗ್ರೈನ್ ತೂಗುತ್ತವೆ. ಚೋಳರ ನಾಣ್ಯಗಳೂ ಇದೇ ರೀತಿ 63 ಗ್ರೈನ್ ತೂಗುವುದರಿಂದ ತೂಕದ ಮಟ್ಟಿಗೆ ಹೊಯ್ಸಳರು ಚೋಳರ ನಾಣ್ಯಗಳನ್ನನುಸರಿಸಿದರು. ಚಾಳುಕ್ಯರ ಕಡಿಮೆ ತೂಕದ ನಾಣ್ಯಗಳೂ ಹೊಯ್ಸಳ ನಾಡಿನಲ್ಲಿ ಚಲಾವಣೆಯಲ್ಲಿದ್ದಿರಬೇಕೆನ್ನುವುದಕ್ಕೆ ಶಾಸನಗಳಲ್ಲಿ ಸೂಚನೆ ಇದೆ. ಬೇಲೂರಿನ ಶಾಸನವೊಂದರಲ್ಲಿ 65 ಗದ್ಯಾಣಗಳಿಗೆ ಬಂದ ರೊಕ್ಕ 54 ಗದ್ಯಾಣ ಎಂದು ಹೇಳಿದೆ. ಇಲ್ಲಿ ಮೊದಲನೆಯದು ಚಾಳುಕ್ಯ ನಾಡಿನ ಗದ್ಯಾಣಗಳಾಗಿದ್ದು ಅವಕ್ಕೆ ಪ್ರತಿಯಾಗಿ ಹೊಯ್ಸಳ ಗದ್ಯಾಣಗಳನ್ನು ಪಡೆಯಲಾಯಿತು ಎಂಬ ಅಭಿಪ್ರಾಯವಿರಬಹುದು. ಹೀಗೆಯೇ ಶಾಸನಗಳಲ್ಲಿ ಅಪರೂಪವಾಗಿ ತಿಳಿಸಿರುವ ಲೊಕ್ಕಿಗದ್ಯಾಣ ಚಾಳುಕ್ಯರ ನಾಣ್ಯವಾಗಿರಬಹುದು.

ಹೊಯ್ಸಳರ ನಾಣ್ಯಗಳಿಗೆ ಎರಡು ಕಡೆಯೂ ಬೇರೆ ಬೇರೆ ಮುದ್ರೆಯೊತ್ತಿರುತ್ತಿತ್ತು. ಒಂದು ಕಡೆ ಮೂರ್ತಿಯ ಗುರುತೂ ಮತ್ತೊಂದು ಕಡೆ ಅಂಕನವೂ ಇದ್ದು ಇಂಥ ಪದ್ಧತಿಯನ್ನು ಹೊಯ್ಸಳರು ಹೊಸದಾಗಿ ಆರಂಭಿಸಿದಂತೆ ತೋರುತ್ತದೆ. ಈಗ ದೊರೆತಿರುವ ನಾಣ್ಯಗಳಲ್ಲಿ ಒಂದರ ಮೇಲೆ ಮುಂಭಾಗದಲ್ಲಿ ಮುಂದಿನ ಕಾಲೊಂದನ್ನು ಎತ್ತಿ ನಿಂತಿರುವ ಸಿಂಹ, ಅದರ ಮೇಲೆ ಅದೇ ರೀತಿಯ ಮತ್ತೊಂದು ಸಿಂಹ, ಅದರ ಎರಡು ಕಡೆಯೂ ಚಂದ್ರಸೂರ್ಯರು, ದೊಡ್ಡ ಸಿಂಹದ ಎದುರಿಗೆ ಒಂದು ದಂಡವೂ ಇದೆ. ಹಿಂಭಾಗದಲ್ಲಿ ಶ್ರೀತಳಕಾಡುಗೊಣ್ಣ ಎಂಬ ಅಂಕನ ಮೂರು ಸಾಲಿನಲ್ಲಿ ಕನ್ನಡ ಅಕ್ಷರದಲ್ಲಿದೆ. ಇಲ್ಲಿ ದೊಡ್ಡ ಸಿಂಹ ಮತ್ತು ದಂಡ ಹೊಯ್ಸಳರು ಲಾಂಛನವಾಗಿ ಸ್ವೀಕರಿಸಿದ ಹುಲಿ ಮತ್ತು ಬೆತ್ತವಾಗಿರಬೇಕು. ಶಾರ್ದೂಲ ಲಾಂಛನವು ಸಿಂದದ ಪಟದಲ್ಲಿ ಹೊನ್ನಿನಲ್ಲಿ ಸಲೆನಿಲೆಸಂದುದು ಎಂದು ಶಾಸನವೊಂದು ತಿಳಿಸುತ್ತದೆ. ಮೇಲಿನ ಚಿಕ್ಕ ಸಿಂಹ ದುರ್ಗಿಯನ್ನು ಪ್ರತಿನಿಧಿಸುವ, ಆ ದೇವತೆಯ ವಾಹನವಾಗಿರಬಹುದು. ತಳಕಾಡುಗೊಂಣ್ಣ ಎಂಬುದು ವಿಷ್ಣುವರ್ಧನ ತಲಕಾಡನ್ನು ಗೆದ್ದ ಅನಂತರ ಇಟ್ಟುಕೊಂಡ ಬಿರುದಾದ್ದರಿಂದ ಈ ನಾಣ್ಯ ವಿಷ್ಣುವರ್ಧನನದಾಗಿರಬೇಕು. ಇದೇ ರೀತಿ ಮತ್ತೊಂದು ನಾಣ್ಯದ ಮೇಲೆ ಮುಂಭಾಗದಲ್ಲಿ ಅದೇ ಸಿಂಹಗಳ ಲಾಂಛನವಿದ್ದರೂ ಅದು ಸ್ಪಷ್ಟವಾಗಿಲ್ಲದೆ ಸಾಂಕೇತಿಕವಾಗಿದೆ. ಹಿಂಭಾಗದಲ್ಲಿ ವಿಷ್ಣುವರ್ಧನನ ಮತ್ತೊಂದು ಬಿರುದಾದ ನೊಳಂಬವಾಡಿಗೊಣ್ಡ ಎಂಬ ಮೂರು ಸಾಲಿನ ಅಂಕನವಿರುವುದರಿಂದ ಇದೂ ವಿಷ್ಣುವರ್ಧನನದೇ ಆಗಿರಬೇಕು. ಮೂರನೆಯ ಬಗೆಯ ನಾಣ್ಯಗಳ ಮುಂಭಾಗದಲ್ಲಿ ಶಂಖಚಕ್ರಗಳನ್ನು ಹಿಡಿದ, ಸಿಂಹವಾಹನೆಯಾದ ದುರ್ಗಾ ಮತ್ತು ಹಿಂಭಾಗದಲ್ಲಿ ಶ್ರೀ ಪ್ರತಾಪನಾರಸಿಂಹ ಎಂಬ ಅಂಕನ ಇವೆ. ಇದು ಬಹುಶಃ ಒಂದನೆಯ ನರಸಿಂಹನ ಕಾಲದ್ದಾಗಿರಬಹುದು. ಉಳಿದಂತೆ ಬೇರೆ ರಾಜರ ಅಂಕನಗ ಳುಳ್ಳ ನಾಣ್ಯಗಳು ದೊರೆತಿಲ್ಲ. ಇವು ಸುಮಾರು 63 ಗ್ರೈನ್ ತೂಕವುಳ್ಳವಾ ಗಿದ್ದು ಶಾಸನಗಳಲ್ಲಿ ತಿಳಿಸಿರುವ ಗದ್ಯಾಣಗಳಾಗಿರಬೇಕು. ಸುಮಾರು ಇದರ 1/10 ಭಾಗದಷ್ಟು ತೂಕವುಳ್ಳ ಚಿಕ್ಕ ಚಿನ್ನದ ನಾಣ್ಯಗಳು ಕೆಲವು ದೊರೆತಿದ್ದು ಒಂದು ಕಡೆ ಸಿಂಹದ ಸಾಂಕೇತಿಕ ಚಿಹ್ನೆಯೂ ಮತ್ತೊಂದೆಡೆ ವರಾಹದ ಸಾಂಕೇತಿಕ ಚಿಹ್ನೆಯೂ ಇದ್ದು ಸಿಂಹದ ಆಕೃತಿ ಇರುವೆಡೆ ವೀರರೇಖೆಯಂತೆ ಚಿಹ್ನೆಯೊಂದಿರುವುದರಿಂದ ಅಂಥ ನಾಣ್ಯಗಳು ವೀರರಾಯಿಪಣಗಳೆಂದು ಕರೆಯಲಾಗುತ್ತದೆ. ಇವು ಮೂರನೆಯ ವೀರಬಲ್ಲಾಳನ ನಾಣ್ಯಗಳಿರಬಹುದೆಂದು ಎಂ.ಎಚ್. ಕೃಷ್ಣ ಅಭಿಪ್ರಾಯಪಡುತ್ತಾರೆ. ಆದರೂ ಅವುಗಳನ್ನು ಹೊಯ್ಸಳರ ಕಾಲದ್ದೆಂದು ನಿಖರವಾಗಿ ಹೇಳಲು ಖಚಿತ ಆಧಾರಗಳು ಸಾಲದಾಗಿವೆ.

	ಶಾಸನಗಳು : ಹೊಯ್ಸಳರ ಆಳಿಕೆ ಶಾಸನಗಳ ರಚನೆಯ ಸಮೃದ್ಧಿಯ ಕಾಲ. ಕರ್ನಾಟಕದ ಶಾಸನಗಳ ರಚನೆಯಲ್ಲಿ ಈ ಕಾಲವನ್ನು ಸುವರ್ಣಯುಗವೆನ್ನಬಹುದು. ಶಾಸನಗಳ ರಚನೆಯ ಕಲೆಗಾರಿಕೆಯಲ್ಲಾ ಗಲಿ, ಲಿಪಿಯ ಸೌಂದರ್ಯದಲ್ಲಾಗಲಿ, ಭಾಷೆ ಹಾಗೂ ಸಾಹಿತ್ಯದ ಸಮೃದ್ಧಿಯಲ್ಲಾಗಲಿ ಹೊಯ್ಸಳ ಶಾಸನಗಳನ್ನು ಸರಿತೂಗುವ ಶಾಸನಗಳು ಅಪರೂಪ. ಐತಿಹಾಸಿಕ ಮಹತ್ತ್ವದ ದೃಷ್ಟಿಯಿಂದಲೂ ಈ ಶಾಸನಗಳನ್ನು ಕಡೆಗಣಿಸುವಂತಿಲ್ಲ. ಹೊಯ್ಸಳರು ಆಳಿದ ಸು.300 ವರ್ಷಗಳ ಅವಧಿಯಲ್ಲಿ 2,000ಕ್ಕೂ ಮೀರಿ ಶಾಸನಗಳು ಹುಟ್ಟಿಕೊಂಡಿವೆ. ವಿಷ್ಣುವರ್ಧನನ ಕಾಲಕ್ಕೆ ಮುನ್ನ ಶಾಸನಗಳನ್ನು ಹಾಕಿಸುವಲ್ಲಿ ಅಷ್ಟು ಸಮೃದ್ಧಿಯಾಗಲಿ ವೈವಿಧ್ಯವಾಗಲಿ ಕಂಡುಬರುವುದಿಲ್ಲ. ಶಾಸನಗಳು ಕಗ್ಗಲ್ಲಿನ ಮೇಲೋ ಒರಟುಕಲ್ಲಿನ ಮೇಲೋ ದಪ್ಪ ಅಕ್ಷರಗಳಲ್ಲಿದ್ದು ವಿವರಗಳು ಬಹುಕಡಮೆ ಇರುತ್ತಿದ್ದವು. ವಿಷ್ಣುವರ್ಧನನ ಕಾಲದಲ್ಲಿ ಶಾಸನಗಳ ರಚನೆಯಲ್ಲಿ ಒಂದು ಸಿದ್ಧರೂಪವನ್ನು ಕೊಡಲು, ವೈವಿಧ್ಯವನ್ನು ತರಲು ಪ್ರಯತ್ನಿಸಿದಂತೆ ತೋರುತ್ತದೆ.

	ಹೊಯ್ಸಳರ ಶಾಸನಗಳಲ್ಲಿ ಕಂಡುಬರುವ ಒಂದು ವೈಲಕ್ಷಣ್ಯವೆಂದರೆ ಅವರು ಶಾಸನಗಳನ್ನು ಹಾಕಿಸುವಲ್ಲಿ ಒಂದು ಕಡೆ ಚೋಳರನ್ನು ಅನುಕರಿಸಿದ್ದರೆ ಮತ್ತೊಂದು ಕಡೆ ಚಾಳುಕ್ಯರ ಮೇಲ್ಪಂಕ್ತಿಯನ್ನು ಅನುಸರಿಸಿರುವುದು. ಚೋಳರು ಆಕ್ರಮಿಸಿದ್ದ ಗಂಗವಾಡಿಯ ಭಾಗವಾಗಿದ್ದ ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಭಾಗಗಳನ್ನು ಹಿಂದಕ್ಕೆ ಪಡೆದ ಮೇಲೆ ಬಹುಕಾಲ ಆ ಭಾಗಗಳಲ್ಲಿ ಹೊಯ್ಸಳರೂ ತಮಿಳಿನಲ್ಲಿಯೇ ಶಾಸನಗಳನ್ನು ಹಾಕಿಸಿದರು. ಅಷ್ಟೇ ಅಲ್ಲ, ಚೋಳರಂತೆ ಇವರೂ ದೇವಾಲಯದ ತಳಪಾದಿ ಕಲ್ಲುಗಳು, ಗೋಡೆಗಳು, ಕಂಬಗಳನ್ನೇ ಶಾಸನ ಹಾಕಿಸಲು ಬಳಸಿದರು. ಚೋಳರನ್ನು ಓಡಿಸಿ ತಲಕಾಡನ್ನು ಗೆದ್ದುಕೊಂಡು, ಅಲ್ಲಿ ವಿಷ್ಣುವರ್ಧನ ಕಟ್ಟಿಸಿದ ಕೀರ್ತಿನಾರಾಯಣಸ್ವಾಮಿ ದೇವಾಲಯದ ತಳಪಾದಿಯ ಮೇಲೆ ಈ ವಿಷಯವನ್ನು ತಿಳಿಸುವ ಮತ್ತು ದತ್ತಿ ಕೊಟ್ಟುದನ್ನು ತಿಳಿಸುವ ಹಲವಾರು ಶಾಸನಗಳಿರುವುದು ತಮಿಳಿನಲ್ಲಿಯೇ. ಇಂಥ ನೂರಾರು ಶಾಸನಗಳನ್ನು ಅಗರದ ರಾಮೇಶ್ವರ, ನರಸಿಂಹ, ದುರ್ಗಾ ದೇವಾಲಯಗಳ ಮೇಲೆ, ಮಾರೆಹಳ್ಳಿ ನರಸಿಂಹ ದೇವಾಲಯದ ಮೇಲೆ, ಬೆಳಗೊಳದ ಜನಾರ್ದನಸ್ವಾಮಿ ದೇವಾಲಯದ ತಳಪಾದಿಯ ಮೇಲೆ, ತೊಣ್ಣೂರಿನ ನಾರಾಯಣ, ಗೋಪಾಲಕೃಷ್ಣ, ನರಸಿಂಹಸ್ವಾಮಿ ದೇವಾಲಯಗಳಲ್ಲಿ ನೋಡಬಹುದು. ಅಪರೂಪವಾಗಿ ಹಳೇಬೀಡಿನ ಪಕ್ಕದಲ್ಲಿಯೇ ಇರುವ ನರಸೀಪುರದ ನರಸಿಂಹಸ್ವಾಮಿ ದೇವಾಲಯದ ಗೋಡೆಯ ಮೇಲೆ ತಮಿಳು ಶಾಸನಗಳಿವೆ. ಇವು ಸಾಮಾನ್ಯವಾಗಿ ವಸ್ತುನಿಷ್ಠವಾದ ಕಿರುಗದ್ಯ ಶಾಸನಗಳು. ಕನ್ನಡ ಶಾಸನಗಳಿಗೆ ಹೋಲಿಸಿದರೆ ಇಂಥ ಶಾಸನಗಳ ಸಂಖ್ಯೆ ಬಹು ಕಡಮೆ ಎನ್ನಬಹುದು. ಹೊಯ್ಸಳರ ಒಟ್ಟು ಶಾಸನಗಳಲ್ಲಿ ಈ ತಮಿಳು ಶಾಸನಗಳ ಸಂಖ್ಯೆ ಬಹು ಕಡಮೆ.

ಹೊಯ್ಸಳರು ಹೇರಳವಾಗಿ ಹಾಕಿಸಿರುವ ಕನ್ನಡ ಶಾಸನಗಳು ಪ್ರಸಿದ್ಧವಾದುವು. ಮೊದಮೊದಲು ದೇವಾಲಯದ ಗೋಡೆಗಳ ಮೇಲೆ ಶಾಸನಗಳನ್ನು ಹಾಕಿಸುವ ಪದ್ಧತಿಯನ್ನನುಸರಿಸಿದರೂ ಶಾಸನಗಳನ್ನು ಕಂಡರಿಸುವುದಕ್ಕಾಗಿಯೇ ಬೇರೆಯಾಗಿ ಶಿಲಾಫಲಕಗಳನ್ನು ಸಿದ್ಧಪಡಿಸುವ ಪದ್ಧತಿ ಸಾಮಾನ್ಯವಾಯಿತು. ವಿಷ್ಣುವರ್ಧನ ಬೇಲೂರಿನಲ್ಲಿ ವಿಜಯ ನಾರಾಯಣಸ್ವಾಮಿ ದೇವಾಲಯವನ್ನು ಕಟ್ಟಿಸಿದಾಗ ಅದರ ವಿವರಗಳನ್ನು ತಿಳಿಸುವ ದೀರ್ಘವಾದ ಶಾಸನವನ್ನು ಆ ದೇವಾಲಯದೊಳಗಿನ ಗೋಡೆಯ ಮೇಲೆ ಹಾಕಿಸಿದ್ದಾನೆ. ಹಾಗೆಯೇ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಒಳಗೋಡೆಯ ಮೇಲೆ ಹದಿನಾರು ದತ್ತಿ ಶಾಸನಗಳಿವೆ. ಶಾಂತಿಗ್ರಾಮದ ನರಸಿಂಹ ದೇವಾಲಯದ ಮುಂಭಾಗದ ಗೋಡೆಯ ತುಂಬ ಕಂಡರಿಸಿರುವ ಶಾಸನಗಳನ್ನೂ ನಿಟ್ಟೂರಿನ ಜೈನಬಸದಿಯ ಮುಂಭಾಗದ ಗೋಡೆಯ ಮೇಲೆ ಆ ಬಸದಿಯನ್ನು ಕಟ್ಟಿಸಿದ ವಿವರಗಳನ್ನು ತಿಳಿಸುವ ಶಾಸನವನ್ನೂ ನೋಡಬಹುದು. ಗೋಡೆಗಳನ್ನೂ ಶಿಲ್ಪಗಳಿಂದ ತುಂಬಿಸುತ್ತಿದ್ದುದರಿಂದ ಮತ್ತು ಕಾರ್ನೀಸುಗಳೂ ಅಲಂಕರಣಗಳಿಂದ ಕೂಡಿರುತ್ತಿದ್ದುದರಿಂದ ಅವುಗಳ ಮೇಲೆ ಶಾಸನ ಹಾಕಿಸುವ ಪದ್ಧತಿ ಕೈಬಿಟ್ಟುಹೋಗಿರಬೇಕು. ಇದರ ಬದಲು ಕೆಲವು ವೇಳೆ ಕಂಬದ ಬುಡದ ಮುಖಗಳ ಮೇಲೋ, ಅಡ್ಡತೊಲೆಗಳ ಮೇಲೋ ದತ್ತಿಶಾಸನಗಳಿರುವುದುಂಟು. ನರಸೀಪುರದ ನರಸಿಂಹ ದೇವಾಲಯ, ಹೆಗ್ಗೆರೆಯ ಜೈನಬಸದಿ, ಹಿರೇನಲ್ಲೂರಿನ ಈಶ್ವರ ದೇವಾಲಯ, ಬಗ್ಗವಳ್ಳಿಯ ನರಸಿಂಹ ದೇವಾಲಯಗಳ ಮುಖಮಂಟಪ ಅಥವಾ ನವರಂಗದ ತೊಲೆಗಳ ಮೇಲೆ ಈ ರೀತಿಯ ಶಾಸನಗಳಿವೆ. ಆದರೆ ಇವರ ಶಾಸನಗಳಲ್ಲಿ ಮುಖ್ಯವಾದುವೂ ವಿಶಿಷ್ಟವಾದುವೂ ಎಂದರೆ ದೇವಾಲಯ, ಬಸದಿಗಳ ಮುಂದೆ ಬೇರೆಯಾಗಿ ನಿಲ್ಲಿಸಿರುವ ಶಾಸನ ಕಲ್ಲುಗಳು. ಈ ಕಾಲದಲ್ಲಿ ಇಂಥ ಶಾಸನ ಲೇಖನವೂ ಒಂದು ಕಲೆಯಾಗಿ ಬೆಳೆಯಿತು. ಸುಂದರವಾದ ಕಲ್ಲಿನ ಹಲಗೆ, ಅದರ ಮೇಲ್ಭಾಗ ಕಮಾನಾಗಿದ್ದು ಅದಕ್ಕೆ ಬಳ್ಳಿಸುರುಳಿಯ ಅಂಚು; ಆ ಕಮಾನಿನ ಕೆಳಗೆ ಆಯಾ ದೇವಾಲಯ, ಬಸದಿಗಳಿಗೆ ಸಂಬಂಧಿಸಿದಂತೆ ದೇವತಾಮೂರ್ತಿಗಳು-ಶಿವದೇವಾಲಯವಾದರೆ ಲಿಂಗ, ನಂದಿ, ಪೂಜಾರಿ ಭಕ್ತರ ಮೂರ್ತಿಗಳು; ವಿಷ್ಣುದೇವಾಲಯವಾದರೆ ಆ ದೇವಾಲಯದ ಮೂಲಮೂರ್ತಿಗಳಾದ ಕೇಶವ ಅಥವಾ ನರಸಿಂಹ ಅಥವಾ ವೇಣುಗೋಪಾಲ, ಬಸದಿಯಾದರೆ ಮುಕ್ಕೊಡೆಯ ಕೆಳಗೆ ಜಿನಮೂರ್ತಿ-ಅಲ್ಲಿಂದ ಕೆಳಗೆ ಮಟ್ಟಸವಾಗಿ ನುಣುಪಾಗಿ ಮಾಡಿರುವ ಕಲ್ಲಿನ ಮೇಲೆ ಗುಂಡಾಗಿ ಒಂದೇ ಪ್ರಮಾಣದಲ್ಲಿ ಅಂದವಾಗಿ ಕೊರೆದಿರುವ ಪಂಕ್ತಿಗಳು, ಅದರಲ್ಲಿಯೂ ಮೊದಲ ಮತ್ತು ಕಡೆಯ ಸಾಲುಗಳಲ್ಲಿ ತಲೆಕಟ್ಟನ್ನೋ ಒತ್ತಕ್ಷರವನ್ನೋ ದೀರ್ಘವನ್ನೊ ಬಳ್ಳಿಸುರುಳಿಯಂತೆ, ಎಲೆಯಂತೆ, ಹಕ್ಕಿಯಂತೆ, ಗರಿಯಂತೆ ಬೆಳೆಸಿರುವಲ್ಲಿ ಬರೆದವನ ಅಥವಾ ಕೊರೆದವನ ಕಲೆಗಾರಿಕೆಯ ಸೊಗಸು ಎದ್ದು ಕಾಣುತ್ತದೆ. ಸೋಮನಾಥಪುರದ ಕೇಶವ ದೇವಾಲಯದ, ಪಂಚಲಿಂಗ ದೇವಾಲಯದ ಶಾಸನಗಳು, ಶ್ರವಣಬೆಳಗೊಳದ ಅಕ್ಕನ ಬಸದಿಯ ಶಾಸನ, ತಿಪ್ಪೂರಿನ ಗಂಗರಾಜನ ಶಾಸನ, ಗೋವಿಂದನಹಳ್ಳಿ, ಕೆರೆಸಂತೆ, ವರಾಹನಾಥ ಕಲ್ಲಹಳ್ಳಿಯ ಶಾಸನಗಳು ಈ ಮೊದಲಾದವು ಇಂಥ ಸುಂದರವಾದ ಅಭಿವ್ಯಕ್ತಿಗೆ ಮಾದರಿಗಳು.

	ದೇವಾಲಯದ ಗೋಡೆಗಳ ಮೇಲೆ ಕಂಡರಿಸಿರುವ ಮೂರ್ತಿಗಳ ಪೀಠಗಳ ಮೇಲೆ ಅವುಗಳ ಹೆಸರನ್ನೋ ಅಥವಾ ಕಂಡರಿಸಿದ ರೂವಾರಿಯ ಹೆಸರನ್ನೋ ತಿಳಿಸುವ-ತ್ರಿವಿಕ್ರಮ, ಸಂಕ್ರಂದನ, ಅಚ್ಯುತ ಅಥವಾ ಮಲ್ಲಿತಂಮ, ಮಸಣ, ಮಾಬ, ಮಾಣಿಬಲಕಿ ಇತ್ಯಾದಿ-ಒಂದೇ ಪದದ ಪೀಠಶಾಸನಗಳಿಂದಾರಂಭಿಸಿ, ಮೇಲೆ ಹೇಳಿದ ಶಾಸನಗಳನ್ನು ಕಂಡರಿಸಲೆಂದೇ ತಯಾರಿಸಿದ ಸುಂದರವಾದ ಶಿಲಾಫಲಕಗಳ ಮೇಲಿನ ವಿಸ್ತಾರವಾದ ದೇವತಾಸ್ತುತಿ, ರಾಜಮನೆತನದ ಪೀಳಿಗೆಯ ವರ್ಣನೆ, ರಾಜನ ವಿಸ್ತಾರವಾದ ಹೆಗ್ಗಳಿಕೆ, ಅವನ ಕೈಕೆಳಗಿನ ಸಾಮಂತ ಅಥವಾ ಅಧಿಕಾರಿಯ ಹೆಗ್ಗಳಿಕೆ, ಅವನ ವಂಶ, ಅವನು ನಿರ್ಮಿಸಿದ ದೇವಾಲಯ, ಬಿಟ್ಟ ದತ್ತಿ ಹಾಗೂ ಅವುಗಳ ವರ್ಣನೆ, ದತ್ತಿ ಪಡೆದವರ ವಂಶಾವಳಿ, ಕೊನೆಯಲ್ಲಿ ಶಪನ ಮುಂತಾದ ಹತ್ತಾರು ವಿವರಗಳನ್ನೊಳಗೊಂಡ ದೀರ್ಘವಾದ ಶಾಸನಗಳವರೆಗೂ ವಿಷಯವ್ಯಾಪ್ತಿಯುಂಟು. ಹೊಯ್ಸಳ ರಾಜರಂತೆ ಅವರ ಪ್ರಧಾನಿಗಳು, ದಂಡನಾಯಕರು, ಇತರ ಅಧಿಕಾರಿಗಳು ದೇವಾಲಯಗಳನ್ನು ನಿರ್ಮಿಸಿ ಅವುಗಳಿಗೆ ದತ್ತಿಬಿಟ್ಟ ಶಾಸನಗಳು ಹೀಗೆ ವಿಸ್ತಾರವಾಗಿರುತ್ತವೆ. ಗಂಗರಾಜ, ಪುಣಿಸ, ಹುಳ್ಳ, ಚಂದ್ರಮೌಳಿ, ಬೂಚಿರಾಜ, ಗೋವಿಂದ, ಪೋಲಾಳ್ವ, ಸೋಮನಾಥ ಮೊದಲಾದವರು ಹಾಕಿಸಿರುವ ಇಂಥ ಶಾಸನಗಳಲ್ಲಿ ವಿವರಗಳನ್ನು ಗದ್ಯಪದ್ಯಾತ್ಮಕವಾಗಿ ಚಂಪೂ ಶೈಲಿಯಲ್ಲಿ ಕೊಡುವುದು ಪದ್ಧತಿ. ಅಂದವಾದ ಕಲ್ಲಿನ ಕಂಡರಣೆ, ಸುಂದರವಾದ ಲಿಪಿಗಳಿರುವಂತೆ ಉತ್ತಮ ಸಾಹಿತ್ಯ ಲಕ್ಷಣ ಗಳನ್ನೂ ಈ ಶಾಸನಗಳಲ್ಲಿ ಕಾಣಬಹುದು. ಚಿದಾನಂದ ಬುಧ, ಜನ್ನ ಮೊದಲಾದ ಪ್ರಸಿದ್ಧ ಕವಿಗಳೂ ಇಂಥ ಶಾಸನಗಳನ್ನು ರಚಿಸಿದ್ದಾರೆ. ರಾಜರ ಪೀಳಿಗೆಯನ್ನು ಕೊಡುವಲ್ಲಿ, ಅವರ ಗುಣಗಾನ ಮಾಡುವಲ್ಲಿ ಒಂದೇ ಬಗೆಯ ಪದ್ಯಗಳನ್ನು ಹಲವಾರು ಶಾಸನಗಳಲ್ಲಿ ಕಾಣಬಹುದು. ಬಹುಶಃ ಆಸ್ಥಾನದಲ್ಲಿದ್ದ ಪಂಡಿತರಿಂದ ರಾಜವಂಶ ಪ್ರಶಸ್ತಿಯನ್ನು ಬರೆಸಿಟ್ಟಿದ್ದು ಹೊಸ ಹೊಸ ಶಾಸನಗಳನ್ನು ರಚಿಸುವಾಗ ಆ ಪ್ರಶಸ್ತಿಯಿಂದ ಕೆಲಕೆಲ ಪದ್ಯಗಳನ್ನು ಆಯ್ದುಕೊಳ್ಳುತ್ತಿದ್ದರೆಂದು ತೋರುತ್ತದೆ. ಧರ್ಮಕಾರ್ಯಗಳನ್ನು, ಪುಣ್ಯಕಾರ್ಯಗಳನ್ನು, ದಾನದತ್ತಿಗಳನ್ನು ಉಲ್ಲೇಖಿಸುವುದೇ ಈ ಶಾಸನಗಳ ಉದ್ದೇಶವಾದರೂ ಅವುಗಳಲ್ಲಿ ಆಯಾ ಕಾಲದಲ್ಲಿ ಆಳುತ್ತಿದ್ದ ರಾಜನ ವಂಶ ಮತ್ತು ಪ್ರಶಸ್ತಿಗಳನ್ನು ಕೊಡುವ ಪದ್ಧತಿ ಇದ್ದುದರಿಂದ ಸ್ವಾಭಾವಿಕವಾಗಿ ಐತಿಹಾಸಿಕ ವಿಷಯಗಳು ಇವುಗಳಲ್ಲಿ ತುಂಬಿರುತ್ತವೆ. ಅನೇಕ ಶಾಸನಗಳು ಆ ಕಾಲದ ಜನಜೀವನ, ಸಾಮಾಜಿಕ ಆರ್ಥಿಕ ಸ್ಥಿತಿ, ಸಾಂಸ್ಕøತಿಕ ಬೆಳೆವಣಿಗೆ, ಮತಗಳಲ್ಲಿನ ಸೌಹಾರ್ದ ಮೊದಲಾದ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.

	ಹೊಯ್ಸಳರ ಕಾಲದ ತಾಮ್ರಶಾಸನಗಳ ಸಂಖ್ಯೆ ಬಹು ಕಡಮೆ. ಅಲ್ಲಿಯವರೆಗೆ ಈ ಭಾಗದಲ್ಲಿ ಹಾಕಿಸುತ್ತಿದ್ದ ತಾಮ್ರಶಾಸನಗಳ ಮಾದರಿಯನ್ನು ಕೈಬಿಟ್ಟು ಹೊಯ್ಸಳರು ಚೋಳರನ್ನು ಅನುಸರಿಸಿ ತಾಮ್ರದ ಹಲಗೆಗಳನ್ನು ದಪ್ಪನಾಗಿಯೂ ಅಗಲವಾಗಿಯೂ ಇರುವಂತೆ ಮಾಡಿದರು. ಮೂರರಿಂದ ಏಳರವರೆಗೆ ಈ ಹಲಗೆಗಳಿದ್ದು ದಪ್ಪನಾದ ಬಳೆಗೆ ಅವುಗಳನ್ನು ಸೇರಿಸಿರುತ್ತಿತ್ತು. ಈ ಬಳೆಗೆ ಹುಲಿಯ ಗುರುತಿನ ಮುದ್ರೆ ಹಾಕಿಸುತ್ತಿದ್ದರು. ಓಲೆಯ ಗರಿಯಂತೆ ಅಡ್ಡಡ್ಡಲಾಗಿರುತ್ತಿದ್ದ ತಾಮ್ರಶಾಸನಗಳು ಈಗ ಉದ್ದುದ್ದವಾಗಿದ್ದು ಮೇಲ್ಭಾಗದಲ್ಲಿ ಉಂಗುರ ಮುದ್ರೆಗಳು ಸೇರಿದುವು. ಶಿಲಾಶಾಸನಗಳಂತೆ ಅಕ್ಷರಗಳನ್ನು ಅತಿ ಗುಂಡಾಗಿ ಕೊರೆದು ಮೇಲಿನ ಮತ್ತು ಕೆಳಗಿನ ಸಾಲುಗಳ ಅಕ್ಷರಗಳಿಗೆ ಬಗೆಬಗೆಯ ಅಲಂಕರಣ ಮಾಡಿರುವುದುಂಟು. ಇವುಗಳಲ್ಲಿ ಮಾದರಿಯಾ ದುದು ಬೇಲೂರಿನ ಚೆನ್ನಕೇಶವ ದೇವಾಲಯದ ಬಗೆಗೆ ವಿವರಗಳನ್ನು ಕೊಡುವ ತಾಮ್ರಶಾಸನ. ಹೊಯ್ಸಳರ ಕಾಲದ ತಾಮ್ರಶಾಸನಗಳೇ ಕರ್ನಾಟಕದ ತಾಮ್ರಶಾಸನಗಳಲ್ಲೆಲ್ಲ ಹೆಚ್ಚು ವಿಸ್ತಾರವಾದುವೂ ತೂಕವುಳ್ಳವೂ ಆಗಿವೆ. ಇವರು ಮೊದಮೊದಲಿನ ಶಾಸನಗಳಲ್ಲಿ ಕನ್ನಡ ಹಾಗೂ ಸಂಸ್ಕøತ-ಈ ಎರಡೂ ಭಾಷೆ ಹಾಗೂ ಲಿಪಿಯನ್ನು ಬಳಸಿದ್ದುಂಟು. ಅನಂತರದ ತಾಮ್ರಶಾಸನಗಳು ನಾಗರಿಲಿಪಿಯಲ್ಲಿದ್ದು ಸಂಸ್ಕøತದಲ್ಲಿಯೇ ಇವೆ.

	ಈ ಕಾಲದಲ್ಲಿ ವೀರಗಲ್ಲುಗಳೂ ಹೇರಳವಾಗಿ ದೊರೆತಿವೆ. ಗಂಗರ ಕಾಲದ ವೀರಗಲ್ಲುಗಳಿಗಿಂತ ಭಿನ್ನವಾಗಿರುವ ಈ ವೀರಗಲ್ಲುಗಳಲ್ಲಿ ಗೊತ್ತಾದ ಒಂದು ಆಕಾರ ಬಳಕೆಗೆ ಬಂದಿದೆ. ಆದರೆ ಇಲ್ಲಿನ ಶಿಲ್ಪಗಳಲ್ಲಿ ಗಂಗರ ವೀರಗಲ್ಲುಗಳ ಮೇಲೆ ಕಾಣುವ ಕೆಚ್ಚು ಕಸುವು ಅಷ್ಟಾಗಿ ಕಂಡುಬರುವುದಿಲ್ಲ.

	ಹೊಯ್ಸಳರ ಕಾಲಕ್ಕೇ ವಿಶಿಷ್ಟವಾದ ಕೆಲವು ಶಾಸನಗಳುಂಟು. ಈ ರಾಜರಿಗೆ ನಿಷ್ಠರಾಗಿದ್ದ ಲೆಂಕರು ತಮ್ಮ ರಾಜ ನಿಧನವಾದಲ್ಲಿ ತಾವೂ ಉಳಿಯುವುದಿಲ್ಲವೆಂಬ ಪ್ರತಿಜ್ಞೆ ಮಾಡಿ ಅದೇ ರೀತಿ ಪ್ರಾಣ ಬಿಟ್ಟ ಉದಾಹರಣೆಗಳಿವೆ. ಇಂಥವರನ್ನು ಗರುಡರು ಎಂದು ಶಾಸನಗಳು ಕರೆದಿವೆ. ಇಂಥ ಗರುಡರ ನೆನಪಿಗಾಗಿ ಹಾಕಿಸಿದ ಶಾಸನಗಳನ್ನು ಸಾಮಾನ್ಯವಾಗಿ ಅದಕ್ಕೇ ಮೀಸಲಾದ ಕಂಬಗಳ ಬುಡದ ಮುಖಗಳ ಮೇಲೆ ಕಂಡರಿಸಿ ದೇವಾಲಯಗಳ ಬಳಿ ನಿಲ್ಲಿಸಿರುತ್ತಾರೆ. ಇವುಗಳನ್ನು ಗರುಡಗಂಬಗಳೆಂದು ಕರೆಯಬಹುದು. ಅಗ್ರಹಾರ ಬಾಚಹಳ್ಳಿಯ ಹುಣಸೇಶ್ವರ ದೇವಾಲಯದ ಮುಂದೆ ನಿಂತಿರುವ ಮೂರು ಕಂಬಗಳ ಮೇಲಿನ ಶಾಸನಗಳು ಹೊಯ್ಸಳರಾಜರಿಗೆ ಗರುಡರಾದ ಲೆಂಕರ ಒಂದು ಪೀಳಿಗೆಯನ್ನೇ ಕೊಡುತ್ತವೆ. ಈ ಕಂಬಗಳ ಮೇಲೆ ಆನೆಯನ್ನೇರಿದ ವೀರ ತನ್ನ ಹೆಂಡತಿ ಮತ್ತು ಹಿಂಬಾಲಕರೊಂದಿಗಿದ್ದು ಗರುಡನೊಡನೆ ಹೋರಾಡುತ್ತಿರುವ ಶಿಲ್ಪವಿದೆ. ಅತ್ಯಂತ ಪ್ರಸಿದ್ಧವಾದ ಗರುಡಶಾಸನ ವೆಂದರೆ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ರುವ, ಕುವರಲಕ್ಷ್ಮನು ಇಮ್ಮಡಿ ಬಲ್ಲಾಳನಿಗೆ ಗರುಡನಾದುದನ್ನು ತಿಳಿಸುವ ಸ್ತಂಭಶಾಸನ. ಅವನೊಂದಿಗೆ ಅವನ ಸಾವಿರ ಜನ ಭಟರೂ ಅವರ ಹೆಂಡಿರೂ ಪ್ರಾಣತೆತ್ತುದನ್ನು ಇದು ವರ್ಣಿಸುತ್ತದೆ. ಕಂಬದ ಸುತ್ತಲೂ ಇರುವ ಶಿಲ್ಪ ಅವರು ಆತ್ಮಾರ್ಪಣೆ ಮಾಡಿಕೊಂಡ ಬೇರೆ ಬೇರೆ ರೀತಿಯನ್ನು ಚಿತ್ರಿಸುತ್ತದೆ. ಅದೇ ದೇವಾಲಯದಲ್ಲಿ ತೊಲೆ ಯೊಂದಕ್ಕೆ ಊರೆಯಾಗಿ ಕೊಟ್ಟಿರುವ ಪ್ರೌಢದೇವರಾಯನ ಕಂಬವೂ ಇಂಥ ಒಬ್ಬ ಗರುಡನ ನೆನಪಿಗೆ ಹಾಕಿಸಿರುವ ಶಾಸನವೇ. ಒಂದನೆಯ ನರಸಿಂಹನ ಆಸ್ಥಾನದಲ್ಲಿ ಗಮಕಿಗಳು ವರ್ಣಿಸಿದ ಬಾವನ್ನವೀರರ ವೀರಾಲಾಪನವನ್ನು ಕೇಳಿದ ರವಳಬೋವನೆಂಬ ವೀರನು ಅಲ್ಲಿಯೇ ಆತ್ಮಾರ್ಪಣೆ ಮಾಡಿ ವೀರತ್ವ ಮೆರೆದುದನ್ನು ವರ್ಣಿಸುವ ಈ ಅಪರೂಪದ ರೋಮಾಂಚಕರ ಶಾಸನಗಳನ್ನು ಕಣ್ಣಾರೆ ಕಂಡು ವರ್ಣಿಸಿದವನು ಮಾಧವ ವಿಬುಧ. ಕಲೆ, ಲಿಪಿ, ಭಾಷೆ, ಸಾಹಿತ್ಯ, ಸಮೃದ್ಧಿ, ವೈವಿಧ್ಯ-ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಹೊಯ್ಸಳರ ಶಾಸನಗಳು ಕರ್ನಾಟಕ ಶಾಸನಸಂಪತ್ತಿಗೆ ಮೆರುಗನ್ನು ನೀಡಿವೆ ಎನ್ನಬಹುದು.
			(ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ